ಬೆಂಗಳೂರು: ಕತಾರ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಗೆ ಮಾದಕವಸ್ತು ಸರಬರಾಜು ಜಾಲದಲ್ಲಿ ತೊಡಗಿದ್ದ ಇಬ್ಬರು ಅಂತಾರಾಷ್ಟ್ರೀಯ ಮಟ್ಟದ ಆರೋಪಿಗಳನ್ನು ಮಾದಕ ವಸ್ತು ನಿಯಂತ್ರಣ ದಳದ (ಎನ್ ಸಿಬಿ) ಬೆಂಗಳೂರು ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
ಆರ್. ಖಾನ್ ಹಾಗೂ ಎಸ್. ಹುಸೇನ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 3.8 ಕೆಜಿ ಹ್ಯಾಶಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಮೂಲದ ಆರೋಪಿಗಳು ಕಾಸರಗೂಡಿನಿಂದ ನಗರಕ್ಕೆ ಮಾದಕ ವಸ್ತು ಸರಬರಾಜು ಮಾಡಿಕೊಳ್ಳುತ್ತಿದ್ದರು. ಈ ವೇಳೆ, ಯಾರಿಗೂ ಅನುಮಾನ ಬಾರದಂತೆ ಜಾಗರೂಕರಾಗಿರುತ್ತಿದ್ದ ಇವರು ಬ್ಯಾಗ್ಗಳಲ್ಲಿ ಡ್ರಗ್ಸ್ ಇಟ್ಟು ಜೂ.4 ರಂದು ಕೊರಿಯರ್ ಮಾಡಿದ್ದರು.
ಈ ಬಗ್ಗೆ ಮಾಹಿತಿ ಅರಿತ ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನಿಂದ ಕತಾರ್ಗೆ ಸಾಗಿಸುತ್ತಿದ್ದ ಕೊರಿಯರ್ ಮಾಡಲಾಗಿರುವ 70 ಬ್ಯಾಗ್ ಗಳನ್ನು ಜಪ್ತಿ ಮಾಡಿ ಪರಿಶೀಲಿಸಿದಾಗ 1.2 ಕೆ.ಜಿ ಹ್ಯಾಶಿಶ್ ಆಯಿಲ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದೇ ಮಾಹಿತಿ ಆಧರಿಸಿ ತನಿಖೆ ನಡೆಸಿದ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಜೂ.6ರಂದು ಬಂಧಿಸಿ 2.6 ಕೆ.ಜಿ ಹ್ಯಾಶಿಶ್ ಆಯಿಲ್ ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳು ಪ್ರಮುಖವಾಗಿ ಕತಾರ್, ಶ್ರೀಲಂಕಾ, ಮಾಲ್ಡೀವ್ ಸೇರಿದಂತೆ ವಿವಿಧ ದೇಶಗಳಿಗೆ ಹ್ಯಾಶಿಶ್ ಆಯಿಲ್ ಸರಬರಾಜು ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಮಾದಕ ವಸ್ತು ಜಾಲದಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ಸಹಚರರನ್ನು 2019ರಲ್ಲಿ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಈಗ ಬಂಧಿತ ಆರೋಪಿಗಳ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಓದಿ: ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ನಟ ಚೇತನ್ ವಿರುದ್ಧ ದೂರು