ಬೆಂಗಳೂರು : ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ ವಿಧಾನಸೌಧದಲ್ಲಿ ಇಂದು ರಾಷ್ಟ್ರೀಯ ಏಕತಾ ದಿವಸ ಆಚರಣೆ ನಡೆಯಿತು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಳಿಕ ಸಿಎಂ ಬೊಮ್ಮಾಯಿಯವರು ಮಾತನಾಡಿ, ಇಂದು ಪಟೇಲ್ ನೆನೆದುಕೊಂಡು ರಾಷ್ಟ್ರೀಯ ಏಕತಾ ದಿವಸ ಆಚರಣೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದಾಗ ಪರಿಪೂರ್ಣತೆಯನ್ನು ಕಾಣುವಂತಹ ಅಗತ್ಯತೆ ಇತ್ತು. ಜನತಂತ್ರವನ್ನು ವಿವಿಧ ಭಾಷೆ, ರಾಜ್ಯಗಳಲ್ಲಿ ಹಂಚಿ ಹೋದಂತಹ ದೇಶವನ್ನು ಒಗ್ಗೂಡಿಸಿ ಒಂದು ಯೂನಿಯನ್ ಆಫ್ ಸ್ಟೇಟ್ಸ್ ಮಾಡಿ ತಾಂತ್ರಿಕ ವ್ಯವಸ್ಥೆಯನ್ನು ತರುವುದರಲ್ಲಿ ಪಟೇಲ್ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ರೈತರು, ಕೂಲಿ ಕಾರ್ಮಿಕರು ತಿರುಗಿ ಬಿದ್ದಾಗ ಬ್ರಿಟಿಷರು ದೇಶ ಬಿಟ್ಟು ಕೊಡುವಂತಾಯಿತು. ಪ್ರಮುಖವಾಗಿ ಗುಜರಾತಿನ ಬಾಂಡೋಲಿ ರೈತ ಸತ್ಯಾಗ್ರಹ ಹಾಗೂ ಬಿಹಾರದ ಚಂಪಾರನ್ ಪ್ಲಾಂಟೇಷನ್ ನೌಕರರು ಸತ್ಯಾಗ್ರಹ ಮಾಡಿದ್ದರು.
ಇದರಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. ದೇಶದಲ್ಲಿರುವ ಗಡಿ ಸವಾಲುಗಳನ್ನು ಎದುರಿಸಲು ಆಂತರಿಕವಾಗಿ ಏಕತೆ, ಅಖಂಡತೆ ಅವಶ್ಯಕತೆ ಇದೆ ಎಂದರು.
ಸಮಾರಂಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಇದನ್ನೂ ಓದಿ: ಪುನೀತ್ 'ಹೃದಯದ ಸ್ಟಾರ್'.. ಕಣ್ಣೀರಿಡುತ್ತಾ ಪುನೀತ್ ಸರಳತೆ, ಸಮಾಜ ಸೇವೆ ನೆನೆದ ಡಿಕೆಶಿ