ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಆಣೆಕಟ್ಟಿನ ಹಿನ್ನೀರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಸೈಲಿಂಗ್ ಸ್ಪರ್ಧೆಯಲ್ಲಿ ಎಂಟು ವರ್ಷದ ಚೆನ್ನೈ ಮೂಲದ ಕೃಷ್ಣ ಎಂಬ ಬಾಲಕ ಭಾಗವಹಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ.
ಆ.27 ರಿಂದ 31ರವರೆಗೆ ಭಾರತೀಯ ಸೇನೆ ಮೈಸೂರು ಮಲ್ಟಿ ಕ್ಲಾಸ್ ಸೈಲಿಂಗ್ ಸ್ಪರ್ಧೆ ಆಯೋಜನೆ ಮಾಡಿದೆ. ಇದರಲ್ಲಿ ದೇಶದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಸೈಲರ್ಸ್ ಆಗಮಿಸಿದ್ದಾರೆ. ಆದರೆ, ಈ ಸ್ಪರ್ಧೆಯಲ್ಲಿ ಎಂಟು ವರ್ಷದ ಬಾಲಕ ಭಾಗಿಯಾಗಿ ಯಾಟ್ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾನೆ.
ಬಾಲಕ ಕೃಷ್ಣ ಆರನೇ ವರ್ಷದಿಂದ ಯಾಟ್ ಚಲಾಯಿಸಲು ಪ್ರಾರಂಭಿಸಿದ್ದು, ಉತ್ತಮ ತರಬೇತಿ ಪಡೆಯುತ್ತಿದ್ದಾನೆ. ಬಾಲಕನಿಗೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಸದ್ಯ ಮದ್ರಾಸ್ ಯಾಟ್ ಕ್ಲಬ್ನಲ್ಲಿ ಸೈಲಿಂಗ್ ತರಬೇತಿ ಪಡೆಯುತ್ತಿದ್ದಾನೆ. ಬಾಲಕನಿಗೆ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಚಿನ್ನಾರೆಡ್ಡಿ ಎಂಬುವವರು ತರಬೇತಿ ನೀಡುತ್ತಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಸಮುದ್ರ ಹಾಗೂ ಇತರ ನೀರಿನಲ್ಲಿ ಯಾಟ್ ಚಲಾವಣೆ ಮಾಡುವುದು ದೊಡ್ಡ ಸಾಧನೆಯಾಗಿದೆ. ಇದನ್ನು ಈ ಬಾಲಕ ಮಾಡಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾನೆ.
ಸೈಲಿಂಗ್ ಪ್ರಾರಂಭ ಮಾಡುವ ಮುನ್ನಾ ಸ್ಕೇಟಿಂಗ್ ಮಾಡುತ್ತಿದ್ದೆ. ನನ್ನ ಸ್ನೇಹಿತ ಯಾಟ್ ಸೈಲಿಂಗ್ ಮಾಡುತ್ತಿದ್ದನ್ನು ಕಂಡು ಪ್ರಭಾವಗೊಂಡೆ. ಅಂದಿನಿಂದ ಸೈಲಿಂಗ್ ತರಬೇತಿಯನ್ನು ಪಡೆಯುತ್ತಿದ್ದೇನೆ. ಈ ಹಿಂದೆ ಹೈದರಾಬಾದಿನ ಹುಸೇನ್ ಸಾಗರದ ಕೆರೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆಗ ಅತ್ಯಂತ ಕಿರಿಯ ಕ್ರೀಡಾಪಟು ಪ್ರಶಸ್ತಿ ಸಿಕ್ಕಿತು. ಸದ್ಯ ಈ ಸ್ಪರ್ಧೆಯಲ್ಲಿ ಗೆಲವು ಸಾಧಿಸಬೇಕು. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬುದು ನನ್ನ ಗುರಿಯಾಗಿದೆ ಎಂದು ಬಾಲಕ ಕೃಷ್ಣ ಹೇಳಿದನು.
ನಂತರ ಬಾಲಕನಿಗೆ ತರಬೇತುದಾರ ಚಿನ್ನಾರೆಡ್ಡಿ ಮಾತನಾಡಿ, ಕಿರಿಯ ವಯಸ್ಸಿನ ಮಕ್ಕಳಿಗೆ ಸೈಲಿಂಗ್ ಬಗ್ಗೆ ಹೇಳಿ ಕೊಡುವುದು ಕಷ್ಟ. ಗಾಳಿಯ ರಭಸ ಮತ್ತು ದಿಕ್ಕು ಹಾಗೂ ನೀರಿನ ಅಲೆಯ ವೇಗದ ಬಗ್ಗೆ ಮಕ್ಕಳು ದೈಹಿಕವಾಗಿ ಅರ್ಥೈಸಿಕೊಂಡರೂ, ಮಾನಸಿಕವಾಗಿ ತಿಳಿಯುವುದು ಕಷ್ಟ. ಆದರೆ, ಇದೆ ಹುಡುಗರು 14-15 ವರ್ಷ ತಲುಪುವ ಹೊತ್ತಿಗೆ ಸೈಲಿಂಗ್ ಬಗ್ಗೆ ಹಿಡಿತ ಸಾಧಿಸಿರುತ್ತಾರೆ ಎಂದರು.
ಓದಿ: ತಂದೆಯೇ ಮಗನನ್ನು ಕೊಂದ ಘಟನೆಗೆ ಸಾಕ್ಷಿಯಾದ 'ಮಣ್ಣಿಂದ ಎದ್ದು ಬಂದ ಕಾಲು'.. ರೋಚಕ ಘಟನೆ..!