ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗಾಗಿ ಭಯೋತ್ಪಾದಕ ನಿಗ್ರಹ ದಳದ (ಎಟಿಸಿ) ವಿಶೇಷ ತಂಡ ಶೋಧ ನಡೆಸುತ್ತಿದೆ.
ಹಲವು ವರ್ಷಗಳಿಂದ ಈ ದಂಧೆ ಮಾಡುತ್ತಿದ್ದ ಬಂಧಿತ ಇಬ್ರಾಹಿಂ ಹಾಗೂ ಗೌತಮ್ ನೀಡಿದ ಮಾಹಿತಿ ಆಧರಿಸಿ ಸಿಮ್ ಕಾರ್ಡ್ ಸರಬರಾಜು ಮಾಡುತ್ತಿದ್ದ ಬೆಂಗಳೂರಿನ ಮೂವರು ಹಾಗೂ ತಮಿಳುನಾಡಿನ ಓರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಐಎಸ್ಡಿ ಕರೆ ಲೋಕಲ್ ಕಾಲ್ ಆಗಿ ಪರಿವರ್ತನೆ: 960 ಸಿಮ್ ಸಹಿತ ಇಬ್ಬರು ಖತರ್ನಾಕ್ಗಳ ಬಂಧನ
ಮಿಲಿಟರಿ ಇಂಟಲಿಜೆನ್ಸ್ ನೀಡಿದ ಮಾಹಿತಿ ಮೇರೆಗೆ ಎಟಿಸಿ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಬಿಟಿಎಂ ಲೇಔಟ್ನಲ್ಲಿ 960 ಸಿಮ್ ಕಾರ್ಡ್ ಅಳವಡಿಸುವ 30 ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಿದ್ದರು.
ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ಸಂಸ್ಥೆಗಳು : ಈ ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂಥದ್ದಾಗಿರುವುದರಿಂದ ಎಟಿಸಿ ಅಧಿಕಾರಿಗಳಿಂದ ಇಂಟಲಿಜೆನ್ಸ್ ಬ್ಯೂರೊ, (ಐಬಿ) ಜಾರಿನಿರ್ದೇಶನಾಲಯ (ಇಡಿ) ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಹ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಯಿದೆ. ಆರೋಪಿಗಳು ಪ್ರತಿ ತಿಂಗಳು 10 ರಿಂದ 15 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದ್ದು, ಹಣ ವರ್ಗಾವಣೆ ಬಗ್ಗೆ ಇಡಿ ಪರಿಶೀಲಿಸುತ್ತಿದೆ. ಐಟಿ ಸಹ ತೆರಿಗೆ ವಂಚನೆ ಮಾಹಿತಿ ಕಲೆ ಹಾಕಿದೆ. ಇನ್ನೊಂದೆಡೆ ಐಬಿ ಸಹ ಪ್ರಕರಣದ ಕುರಿತಂತೆ ಸಂಪೂರ್ಣ ಮಾಹಿತಿ ಪಡೆದಿದೆ.ಎಟಿಸಿ ಜೊತೆಗೆ ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್ ಡಿ) ಆರೋಪಿಗಳ ವಿಚಾರಣೆ ನಡೆಸಲು ತಯಾರಿ ನಡೆಸಿದೆ.
ಇದನ್ನೂ ಓದಿ : ಐಎಸ್ಡಿ ಕರೆ ಪರಿವರ್ತನೆ ಪ್ರಕರಣ: ಕೊರಿಯರ್ನಲ್ಲಿ ಬರುತ್ತಿದ್ದವು ಸಿಮ್
ಕೆಲ ತಿಂಗಳ ಹಿಂದೆ ಈಶಾನ್ಯ ಭಾರತದ ಸೇನಾ ನೆಲೆಗೆ ಹಿರಿಯ ಅಧಿಕಾರಿಗಳ ಸೋಗಿನಲ್ಲಿ ಅಪರಿಚಿತರು ಕರೆ ಮಾಡಿ ಸೇನೆಯ ಕುರಿತ ಕೆಲ ಮಾಹಿತಿ ಕೇಳಿದ್ದರು. ಇದರಿಂದ ಅನುಮಾನಗೊಂಡ ಸೇನಾಧಿಕಾರಿಗಳು ಇದೇ ರೀತಿ ಬೇರೆಸೇನಾನೆಲೆಗಳಿಗೆ ಕರೆಗಳ ಬಗ್ಗೆ ಮಾಹಿತಿ ಕೇಳಿದ್ದಾಗ ಇದೇ ರೀತಿ ಕರೆಗಳು ಬಂದಿರುವುದನ್ನು ಕಂಡುಕೊಂಡಿದ್ದರು.
ಈ ಬಗ್ಗೆ ಮಿಲಿಟರಿ ಇಂಟೆಲಿಜೆನ್ಸ್ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಐಎಸ್ಡಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಬೆಂಗಳೂರಿನಲ್ಲಿ ಪರಿವರ್ತಿಸುತ್ತಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಕರೆಗಳ ಹಿಂದೆ ಪಾಕಿಸ್ತಾನಿ ಇಂಟಲಿಜೆನ್ಸ್ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು.
ಆರ್ಮಿ ಇಂಟೆಲಿಜೆನ್ಸ್ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಎಟಿಸಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದರು. ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲು ಆರೋಪಿಗಳು ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ತಮ್ಮದೇ ವ್ಯವಸ್ಥಿತ ಜಾಲದಿಂದ ಆ್ಯಕ್ಟಿವ್ ಆಗಿರುವ ಸಿಮ್ ಕಾರ್ಡ್ ಗಳನ್ನು ಕೊರಿಯರ್ ಮುಖಾಂತರ ತರಿಸಿಕೊಳ್ಳುತ್ತಿದ್ದರು.