ಬೆಂಗಳೂರು/ಕಲಬುರಗಿ: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ನ. 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ(ಕೆಎಂಎಫ್)ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಿನ್ನೆ(ಸೋಮವಾರ) ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಹಲವಾರು ತಿಂಗಳಿನಿಂದ ಈ ವಿಚಾರ ಚರ್ಚೆಯಾಗುತ್ತಿದೆ. ಹಾಲಿನ ದರ ಏರಿಕೆ ಕುರಿತು ಕೆಎಂಎಫ್ ಅಧ್ಯಕ್ಷರ ಜತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಆ ಬಳಿಕ ಮಂಡಳಿ ಅಧ್ಯಕ್ಷರ ಜತೆಗೂ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಈ ಮೂಲಕ ಮುಖ್ಯಮಂತ್ರಿಯವರ ಮಧ್ಯಪ್ರವೇಶದ ನಂತರ ದರ ಹೆಚ್ಚಳದ ತೀರ್ಮಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.
ಗ್ರಾಹಕರಿಗೆ ಶಾಕ್ ನೀಡಿದ್ದ ಕೆಎಂಎಫ್: ಶೀಘ್ರದಲ್ಲೇ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಅದರಂತೆಯೇ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಮಹಾಮಂಡಳಿ ಗ್ರಾಹಕರಿಗೆ ಶಾಕ್ ನೀಡಿತ್ತು.
ಪ್ರತಿ ಲೀಟರ್ ಹಾಲಿನ ಬೆಲೆ 3 ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದರೂ, ಹೈನುಗಾರರಿಗೆ ವರದಾನವಾಗಲಿದೆ. ಹಾಲಿನ ದರ ಪರಿಷ್ಕರಣೆಯ ಹಣ ಸಂಪೂರ್ಣವಾಗಿ ಹೈನುಗಾರರು ಅಥವಾ ರೈತರಿಗೆ ಸಂದಾಯವಾಗಲಿದೆ. ಅಂದರೆ ಹೆಚ್ಚಳ ಮಾಡಲಾದ ದರವನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ನೀಡಲಾಗುವುದು ಎಂದು ಕೆಎಂಫ್ ತಿಳಿಸಿತ್ತು.
ರಾಜ್ಯದ 16 ಹಾಲು ಒಕ್ಕೂಟಗಳು, ಕೆಎಂಎಫ್ ವತಿಯಿಂದ ದರ ಪರಿಷ್ಕರಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಹೀಗಾಗಿ ರೈತರ ಹೈನುಗಾರಿಕೆ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಬಾಲಚಂದ್ರ ಜಾರಕಿಹೊಳಿ ಮತ್ತು ಎಂಡಿ ಸತೀಶ್ ಹೇಳಿದ್ದರು.
ಸರ್ಕಾರದ ಅನುಮೋದನೆ ಇಲ್ಲದೆ ಹೆಚ್ಚಳ?: ಹಾಲು ಒಕ್ಕೂಟಗಳ ಮನವಿ ಮೇರೆಗೆ ಹಾಲಿನ ದರ ಹೆಚ್ಚಿಸುವಂತೆ ಕಳೆದ 8 ತಿಂಗಳಿನಿಂದ ಕೆಎಂಎಫ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಆದರೆ ಸರ್ಕಾರ ಸ್ಪಂದಿಸಿರಲಿಲ್ಲ. ಹೀಗಾಗಿ ರೈತರು ಒತ್ತಾಸೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ ಕೆಎಂಎಫ್ ಹಾಲಿನ ಬೆಲೆ ಹೆಚ್ಚಿಸಲು ನಿರ್ಧರಿಸಿತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ: ಜನರಿಗೆ ಬೆಲೆ ಏರಿಕೆ ಶಾಕ್.. ನಂದಿನಿ ಹಾಲು, ಮೊಸರಿನ ದರದಲ್ಲಿ ಏರಿಕೆ