ಬೆಂಗಳೂರು: ಮನೆ ಮಂದೆ ನಿಲ್ಲಿಸಿದ್ದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 6.88 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ಹಾಗೂ ಒಂದು ತ್ರಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಮೇ 31ರಂದು ರಾತ್ರಿ 11 ಗಂಟೆ ಸುಮಾರಿಗೆ ನಂಜುಂಡೇಶ್ವರನಗರದ ನಾಗರಾಜ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದರು. ಈ ಬಗ್ಗೆ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಜುಲೈ11ರಂದು ಸಂಜೆ ಅಪರಾಧ ವಿಭಾಗದ ಸಿಬ್ಬಂದಿ ಲಗ್ಗೆರೆಯ ಕೃಷ್ಣಭವನ ಹೋಟೆಲ್ ಬಳಿ ಗಸ್ತಿನಲ್ಲಿದ್ದಾಗ ಮೂವರು ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಬರುತ್ತಿರುವುದನ್ನು ಗಮನಿಸಿ ತಡೆದು ದಾಖಲಾತಿಗಳನ್ನು ಪರಿಶೀಲಿಸಿದಾಗ ಯಾವುದೇ ದಾಖಲಾತಿ ಇರಲಿಲ್ಲ. ಈ ವಾಹನವನ್ನು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದರು.
ಇದನ್ನೂ ಓದಿರಿ: ವಿಡಿಯೋ: ಅಕ್ರಮವಾಗಿ ಪಡೆದ ವಿದ್ಯುತ್ ಸಂಪರ್ಕ ಕತ್ತರಿಸಲು ಹೋಗಿ ಅಧಿಕಾರಿಗಳ ಕೈಗೆ ಹೀಗೆ ಸಿಕ್ಕಿಬಿದ್ದ!
ಆರೋಪಿಗಳನ್ನು ವಶಕ್ಕೆ ಪಡೆದು ಬೆರಳಚ್ಚು ಪರಿಶೀಲನೆಗೆ ಕಳುಹಿಸಿದಾಗ ಈ ಹಿಂದೆ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ರಾಜಗೋಪಾಲನಗರ, ಅನ್ನಪೂರ್ಣೇಶ್ವರಿನಗರ, ಆರ್‌ಎಂಸಿ ಯಾರ್ಡ್, ಪೀಣ್ಯ, ಜಾಲಹಳ್ಳಿ ಠಾಣೆಯಲ್ಲಿ ವಾಹನ ಕಳವು, ಅಂಗಡಿಗಳ ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.