ಬೆಂಗಳೂರು: ಇಂದು ಬೆಳಗ್ಗೆ ಫ್ರೀಡಂ ಪಾರ್ಕ್ನಲ್ಲಿ ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸರ್ಕಾರ ನಮ್ಮ 9 ಬೇಡಿಕೆಗಳನ್ನು ಈಡೇರಿಸುವುದಗಿ ಹೇಳಿದೆ. ಅದಕ್ಕೆ ಲಿಖಿತ ರೂಪದಲ್ಲಿ ಭರವಸೆಯ ಪತ್ರದ ಮೂಲಕ ನಮಗೆ ನೀಡಲಿ. ಸರ್ಕಾರದ ಸಚಿವರು ಖುದ್ದಾಗಿ ಬಂದು ನಮಗೆ ಪತ್ರ ನೀಡಲಿ ಎಂದು ಆಗ್ರಹಿಸಿದ್ದರು.
ಇದಕ್ಕೆ ಸಮ್ಮತಿಸಿದ ಸರ್ಕಾರ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮೂಲಕ ಲಿಖಿತ ಭರವಸೆಯ ಪತ್ರವನ್ನು ಫ್ರೀಡಂ ಪಾರ್ಕ್ಗೆ ಕಳುಹಿಸಿತು. ಸಿಎಂ ಯಡಿಯೂರಪ್ಪ ಆದೇಶದ ಮೇರೆಗೆ ನಂದೀಶ್ ರೆಡ್ಡಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ರಾಜೂ ಗೌಡ ಫ್ರೀಡಂ ಪಾರ್ಕ್ಗೆ ಬಂದು, ಮುಷ್ಕರ ನಿರತರಿಗೆ ಪತ್ರವನ್ನು ಹಸ್ತಾಂತರಿಸಿದರು.
ಬಳಿಕ ಪತ್ರ ಓದಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಿನ್ನೆ ನಿಯೋಗಕ್ಕೆ ಕಳುಹಿಸಿದ 8 ಜನರ ನಿಯೋಗದ ಪ್ರತಿನಿಧಿಗಳು ನಮ್ಮ ಜೊತೆ ಇದ್ದಾರೆ. ಮಾತಾಡಿ ಮುಕ್ತಾಯ ಆಗಿರುವ 10 ವಿಷ್ಯದಲ್ಲಿ 9 ವಿಷಯಗಳ ಬೇಡಿಕೆ ಈಡೇರಿಸುವ ಬಗ್ಗೆ ಒಪ್ಪಿಗೆ ಪತ್ರ ತಲುಪಿಸಿದ್ದಾರೆ. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ ಅಳವಡಿಕೆಗೆ ತೀರ್ಮಾನ, ಕೋವಿಡ್ ಸೋಂಕು ತಗಲಿ ಮೃತಪಟ್ಟ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ(ಸರ್ಕಾರಿ ನೌಕರರಿಗೆ ನೀಡುವಂತೆ ಸಾರಿಗೆ ನೌಕರರಿಗೂ), ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚಿಸಲು ತೀರ್ಮಾನ, ತರಬೇತಿ ಅವಧಿ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ, ನಾಲ್ಕು ನಿಗಮಗಳಲ್ಲಿ ಮಾನವ ಸಂಪನ್ಮೂಲ ಇಲಾಖೆ ಜಾರಿ(HRMS), ನೌಕರರಿಗೆ ಭತ್ಯೆ ನೀಡಲು ತೀರ್ಮಾನ, ನಿಗಮದಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಆಡಳಿತ ವ್ಯವಸ್ಥೆ ರೂಪಿಸುವ ವಿಚಾರಗಳನ್ನು ಪತ್ರದಲ್ಲಿ ತಿಳಿಸಲಾಗಿದೆ.
ಮುಷ್ಕರದ ಬಗ್ಗೆ ಚರ್ಚೆಗೆ ಹೊರಟ ಕೋಡಿಹಳ್ಳಿ ಚಂದ್ರಶೇಖರ್: ಮುಷ್ಕರ ಅಂತ್ಯ ಮಾಡಬೇಕಾ, ಬೇಡವೇ ಎಂಬ ಬಗ್ಗೆ ಸಾರಿಗೆ ಮುಖಂಡರೊಂದಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮತ್ತೊಮ್ಮೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿದ್ದಾರೆ.