ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಹಲವು ಅಭ್ಯರ್ಥಿಗಳು ವಿಧಾನಸೌಧಕ್ಕೆ ಬಂದು ನಾಮಪತ್ರ ಸಲ್ಲಿಸಿದರು. ಇದೇ ವೇಳೆ, ವಿಧಾನಸೌಧದಲ್ಲಿ ಎಲ್ಲ ಪಕ್ಷದ ನಾಯಕ ಓಡಾಟ ಜೋರಾಗಿತ್ತು.
ವಿವಿಧ ಪಕ್ಷದ ನಾಯಕರು ಹಾಗೂ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ವಿಧಾನಸೌಧಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ನಮ್ಮ ಪಕ್ಷದಿಂದ ಗೋವಿಂದರಾಜು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕೋಲಾರ ಭಾಗದಲ್ಲಿ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಾಗಿದೆ. ಚಿಕ್ಕಬಳ್ಳಾಪುರ - ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಶಕ್ತಿ ಸಿಗಲಿದೆ. ಪಕ್ಷದ ಹಿತದೃಷ್ಟಿಯಿಂದ ಅವರಿಗೆ ನಾವು ಟಿಕೆಟ್ ನೀಡಿದ್ದೇವೆ ಎಂದರು.
ಜೆಡಿಎಸ್ ಪರಿಷತ್ ಅಭ್ಯರ್ಥಿ ಗೋವಿಂದರಾಜು ಮಾತನಾಡಿ, ಕುಮಾರಣ್ಣನ ಜೊತೆ ನನ್ನ ಸಂಬಂಧ ಚೆನ್ನಾಗಿತ್ತು. ಅವರು ಹೇಳಿದ ಪಕ್ಷದ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದೇನೆ. ಅವರ ಅಪೇಕ್ಷೆ ಮೆರೆಗೆ ಕೋಲಾರ ಭಾಗದಲ್ಲಿ ಪಕ್ಷ ಕಟ್ಟುವ ಸಲುವಾಗಿ ನನಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಾನು 40 ವರ್ಷಕ್ಕೂ ಹೆಚ್ಚು ಕಾಲ ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪಕ್ಷದ ಹೈಕಮಾಂಡ್ ನನಗೆ ಈ ಅವಕಾಶ ನೀಡಿದೆ. ನನಗೆ ಪರಿಷತ್ ಸ್ಥಾನ ನೀಡಲು ನಾನು ಅರ್ಜಿ ಹಾಕಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಒಪ್ಪಿದ್ದೇನೆ ಎಂದರು.
ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮಾತನಾಡಿ, ನನ್ನ ಸೋಲಿಗೆ ತ್ರಿಮೂರ್ತಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ , ಡಿ ಕೆ ಶಿವಕುಮಾರ್ ಕಾರಣ. ಮೂವರು ಒಟ್ಟಿಗೆ ಸೇರಿ ನನ್ನನ್ನ ಸೋಲಿಸಿದ್ದರು. ವಿಶ್ವನಾಥ್ ಸೋಲಿಗೂ ಅವರೇ ಕಾರಣ ಎಂದರು. ವಿಧಾನ ಪರಿಷತ್ಗೆ ನನ್ನ ಆಯ್ಕೆ ಮಾಡುವ ಬಗ್ಗೆ ವರಿಷ್ಠರು, ರಾಜ್ಯ ನಾಯಕರು ಭರವಸೆ ಕೊಟ್ಟಿದ್ದರೂ ಅದೇ ರೀತಿ ಈಗ ಅವಕಾಶ ನೀಡಿದ್ದಾರೆ. ವಿಶ್ವನಾಥ್ ಹಾಗೂ ನಾವು ಎಲ್ಲರೂ ಒಟ್ಟಾಗಿದ್ದೇವೆ. ಕೋರ್ ಕಮಿಟಿಯಲ್ಲಿ ಮೂವರ ಹೆಸರನ್ನ ಸೂಚಿಸಲಾಗಿತ್ತು. ಆದ್ರೆ ಕೇಂದ್ರ ಚುನಾವಣಾ ಸಮತಿ ವಿಶ್ವನಾಥ್ ಹೆಸರು ಬಿಟ್ಟಿದ್ದಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಗಮನಕ್ಕೆ ತಂದಿದ್ದೇವೆ. ಮುಂದೆ ಎಲ್ಲ ಸರಿಪಡಿಸೋಣ ಅಂತ ಹೇಳಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕಾಂಗ್ರೆಸ್ ನಲ್ಲಿ ಬೇರೆ ಬೇರೆ ಪವರ್ ಸೆಂಟರ್ ಇಲ್ಲ. ಕಾಂಗ್ರೆಸ್ ಒಂದೇ ಪವರ್ ಸೆಂಟರ್. ಕೆಪಿಸಿಸಿಯೇ ಪವರ್ ಸೆಂಟರ್. ಮೊದಲು ಅಸಮಾಧಾನ ಇತ್ತೇನೋ. ಆದ್ರೆ ಈಗ ಯಾವುದೇ ಅಸಮಾಧಾನ ಇಲ್ಲ. ಬಿ.ಕೆ.ಹರಿಪ್ರಸಾದ್ ಪಕ್ಷದ ಕಾರ್ಯಕರ್ತರೇ. ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಹೋದ್ರು, ಬಿ.ಕೆ.ಹರಿಪ್ರಸಾದ್ ಪರಿಷತ್ಗೆ ಬಂದ್ರು ಎಂದರು.