ಬೆಂಗಳೂರು : ಪಾದರಾಯನಪುರ ಘಟನೆ ಹಿಂದಿರುವ ಜಮೀರ್ ಅಹಮ್ಮದ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮೀರ್ ವಿರುದ್ದ ಗೂಂಡಾ ಕಾಯ್ದೆ ಹಾಕಬೇಕು. ಪಾದರಾಯನಪುರ ಗಲಭೆಕೋರರ ವಿರುದ್ದ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಕೋವಿಡ್ 19 ಜಗತ್ತಿಗೆ ಆವರಿಸಿರುವ ಆತಂಕ. ಅಮೆರಿಕ, ಇಟಲಿ ಸೇರಿದಂತೆ ಪ್ರಬಲ ರಾಷ್ಟ್ರಗಳಲ್ಲಿ ಕೂಡ ಸದ್ದು ಮಾಡಿದೆ. ಎಚ್ಚರಿಕೆ ವಹಿಸದ ಅಮೆರಿಕದಲ್ಲಿ, ನಿರ್ಲಕ್ಷ್ಯ ವಹಿಸಿದ ಇಟಲಿಯಲ್ಲಿ ಹೆಚ್ಚಿನ ಸಾವಾಗಿದೆ. ಆದರೆ ಭಾರತದಲ್ಲಿ ಪ್ರಾರಂಭಿಕ ಹಂತದಲ್ಲೇ ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ಇಂದು ಇಡೀ ಜಗತ್ತು ಭಾರತದ ಕಡೆ, ಮೋದಿ ತೆಗೆದುಕೊಳ್ಳುವ ತೀರ್ಮಾನದ ಕಡೆ ನೋಡುತ್ತಿದ್ದಾರೆ. ಮೋದಿ ತೆಗೆದುಕೊಂಡ ತೀರ್ಮಾನಗಳಿಂದಾಗಿ 3 ನೇ ಸ್ಥಾನದಲ್ಲಿದ್ದ ಭಾರತ 11 ಸ್ಥಾನಕ್ಕೆ ಬಂದಿದೆ ಎಂದು ವಿವರಿಸಿದರು.
ಮೋದಿಯವರಿಗೆ ಹಲವು ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ತೊಂದರೆಯಾಗದಂತೆ ಹಲವು ತೀರ್ಮಾನ ತೆಗೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲೂ ಸಾಮಾಜಿಕ ನ್ಯಾಯಕ್ಕೆ ಕೆಲಸ ಮಾಡಿರುವ ಮೋದಿಯವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ರಾಜ್ಯದಲ್ಲಿ ಕೂಡ ಸಿಎಂ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೇಂದ್ರಕ್ಕಿಂತ ಮುಂಚೆಯೇ ಲಾಕ್‌ಡೌನ್ ಘೋಷಿಸಿ ಕೊರೊನಾ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದರು. ಯಡಿಯೂರಪ್ಪನವರ ಕೆಲಸದಿಂದಾಗಿಯೇ ಇವತ್ತು ಕರ್ನಾಟಕ 12ನೇ ಸ್ಥಾನಕ್ಕೆ ಬಂದಿದೆ ಎಂದರು.