ಬೆಂಗಳೂರು : ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್, ಜನರ ತೆರಿಗೆ ಹಣವನ್ನು ವಿವೇಚನೆಯಿಂದ ಬಳಸಿದ್ದರೆ ಕೊರೊನಾ ನಿಯಂತ್ರಿಸಲು ಕಷ್ಟವಾಗುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೂರದೃಷ್ಟಿ ಇರಲಿಲ್ಲ. ದೇಶವನ್ನು ಲೂಟಿ ಮಾಡುವ ಯೋಚನೆ ಬಿಟ್ಟು ಮತ್ಯಾವ ಯೋಚನೆಯೂ ಇರಲಿಲ್ಲ. ಕೋವಿಡ್ ಪರಿಹಾರ ಕಾರ್ಯದಲ್ಲಿ ಸರ್ಕಾರ ಮತ್ತು ಪಕ್ಷ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದೆ.
ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿ ಜಿಲ್ಲೆಗಳಲ್ಲಿ ವಾರ್‌ರೂಮ್ ತೆರೆದಿದ್ದೇವೆ. ಇಲ್ಲಿಗೆ ಬರುವ ಕರೆಗಳನ್ನು ಜಿಲ್ಲಾಡಳಿತ, ಉಸ್ತುವಾರಿ ಸಚಿವರಿಗೆ ತಲುಪಿಸುವ ಕೆಲಸ ಸೇರಿದಂತೆ 13 ಅಂಶಗಳನ್ನೊಳಗೊಂಡ ಸೇವೆ ಮಾಡಲಾಗುತ್ತಿದೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ಕಟೀಲ್ ಸಮರ್ಥಿಸಿಕೊಂಡಿದ್ದು, ಅದನ್ನು ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಪಕ್ಷ ಹಾಗೂ ಸರ್ಕಾರ ಒಂದಾಗಿ ಸೇವೆ ಸಲ್ಲಿಸುತ್ತಿದ್ದು, ಸೇವೆಯೇ ನಮ್ಮ ಪರಮ ಧ್ಯೇಯ. ಮಾತು ಕಡಿಮೆ, ಕೆಲಸ ಹೆಚ್ಚು ಮಾಡುವುದೇ ನಮ್ಮ ಗುರಿ.
ನಮ್ಮ ನಿಯತ್ತು ನಿಷ್ಠೆಯಲ್ಲಿ ಕೊರತೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಜನರ ಪ್ರಾಣ ರಕ್ಷಣೆಯೇ ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಟ್ವೀಟ್ ಮಾಡಲಾಗಿದೆ.
ಸರ್ಕಾರ ಕೈಗೊಳ್ಳುತ್ತಿರುವ ನಿರ್ಣಯಗಳು ನೂರಕ್ಕೆ ನೂರು ಸರಿದಾರಿಯಲ್ಲಿದೆ. ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಬೇರಾವುದೇ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಪರಿಸ್ಥಿತಿ ನಿಭಾವಣೆ ಕಷ್ಟವಿತ್ತು.
ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಕೇವಲ 2 ಏಮ್ಸ್ ಇದ್ದವು, ಮೋದಿ ಸರ್ಕಾರ ಕೇವಲ 7 ವರ್ಷದಲ್ಲಿ 9 ಏಮ್ಸ್ ಸ್ಥಾಪಿಸಿದ್ದಾರೆ ಎಂದು ಕಟೀಲ್ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಟೀಲ್ ಹರಿಹಾಯ್ದಿದ್ದಾರೆ.