ಬೆಳಗಾವಿ/ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವಿನ ಕಲಹಕ್ಕೆ ಬೆಳಗಾವಿಯ ಸುವರ್ಣಸೌಧ ಸಾಕ್ಷಿಯಾಗಿದ್ದು, ಉಭಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಬಿಜೆಪಿ ಸಾವರ್ಕರ್ ಫೋಟೋ ಅಳವಡಿಕೆಯನ್ನು ಸಮರ್ಥಿಸಿಕೊಂಡರೆ, ಕಾಂಗ್ರೆಸ್ ಪಕ್ಷವು ಸ್ಪೀಕರ್ ನಿರ್ಧಾರವನ್ನು ಕಟುವಾಗಿ ವಿರೋಧಿಸಿದೆ. ಹೀಗಾಗಿ ಉಭಯ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ.
ಅಸೆಂಬ್ಲಿ ಹಾಲ್ನಲ್ಲಿ ಸಾವರ್ಕರ್ ಫೋಟೋ ಅಳವಡಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಖಂಡಿಸಿ ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ನಾಯಕರು ಕೈ ನಾಯಕರ ಮೇಲೆ ಮುಗಿಬಿದ್ದಿದ್ದಾರೆ. ಮುಖ್ಯಮಂತ್ರಿಯಾದಿಯಾಗಿ ಹಿರಿಯ ಸಚಿವರು, ಹಿರಿಯ ನಾಯಕರು ಸಾವರ್ಕರ್ ಫೋಟೋ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾವರ್ಕರ್ ಫೋಟೋ ವಿರೋಧಿಸುತ್ತಿರುವ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ ಮಧ್ಯೆ ಸುವರ್ಣಸೌಧದಲ್ಲಿ ಸಾವರ್ಕರ್ ಸೇರಿ ಏಳು ಮಹನೀಯರ ಭಾವಚಿತ್ರ ಅನಾವರಣ
ವಿರೋಧ ಪಕ್ಷವಾಗಿ ತೀರಾ ಕೆಳಮಟ್ಟಕ್ಕೆ ಇಳಿದು ಓರ್ವ ಸ್ವಾತಂತ್ರ್ಯ ಸೇನಾನಿಯ ಬಗ್ಗೆ ಪದೇ ಪದೇ ನಾಲಿಗೆ ಹರಿಬಿಡುತ್ತಿರುವ ಕಾಂಗ್ರೆಸ್ಗೆ ನಾಚಿಕೆಯಾಗಬೇಕು. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರಂತೂ, ಇಲ್ಲಿವರೆಗೆ ಸಾವರ್ಕರ್ ಫೋಟೋ ಹಾಕಿಲ್ಲ, ಈಗ್ಯಾಕೆ ಹಾಕಬೇಕು, ಸಾವರ್ಕರ್ ಓರ್ವ ವಿವಾದಾತ್ಮಕ ವ್ಯಕ್ತಿ ಎಂದು ಹೇಳಿಕೆ ನೀಡುತ್ತಾರೆ. ಇನ್ನು, ಕಾಂಗ್ರೆಸ್‌ನ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಂತೂ ಮೆದುಳನ್ನು ಮಾರಿ ರಾಜಕೀಯಕ್ಕೆ ಬಂದಹಾಗಿದೆ. ಸಾವರ್ಕರ್‌ಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದು ಕೇಳುತ್ತಾರೆ. ಕರ್ನಾಟಕವೇನು ಭಾರತದಿಂದ ಹೊರಗಿದೆಯೇ? ಅಥವಾ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ಒಡೆದು ಆಳುವ ನೀತಿಯನ್ನು ಇಂದಿಗೂ ಜೀವಂತವಿಡಲು ಪ್ರಯತ್ನಿಸುತ್ತಿದ್ದಾರೆಯೇ? ಎಂದು ಕಟೀಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿಗದ ಸಚಿವ ಸ್ಥಾನ: ಸಿಎಂ, ಹೈಕಮಾಂಡ್ ಮೇಲಿನ ಅಸಮಾಧಾನ ಹೊರಹಾಕಿದ ಈಶ್ವರಪ್ಪ
ರಾಜ್ಯ ಬಿಜೆಪಿ ಘಟಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ಗೆ ಜನರಿಗಿಂತ ನಿಮ್ಹಾನ್ಸ್ ಆಸ್ಪತ್ರೆಯ ನುರಿತ ಮನೋವೈದ್ಯರ ಅವಶ್ಯಕತೆ ಹೆಚ್ಚಾಗಿದೆ. ಪರದೇಶಿ ಟಿಪ್ಪುವನ್ನು ಹೊಗಳುವವರು, ದೇಶಪ್ರೇಮಿ ಸಾವರ್ಕರ್ ಫೋಟೋ ಕಂಡರೆ ಉರಿದು ಬೀಳುವವರು ದೇಶ ವಿರೋಧಿಯಾಗಿರಬೇಕು ಅಥವಾ ಮಾನಸಿಕ ಅಸ್ವಸ್ಥರಾಗಿರಬೇಕು! ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ: ಅಧಿವೇಶನ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ