ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಕೆ ಎಸ್ ಈಶ್ವರಪ್ಪ ಅವರ ರಾಜೀನಾಮೆ ಕೇಳುವ ಕಾಂಗ್ರೆಸ್ ನಾಯಕರೇ ಮೊದಲು ನಿಮ್ಮ ಪಕ್ಷದ ಶಾಸಕ ಜಮೀರ್ ಅಹ್ಮದ್ ರಾಜೀನಾಮೆ ಪಡೆಯಿರಿ. ಅವರ ಮೇಲೆ ಕೇಸ್ ದಾಖಲಾಗಿದೆ, ಡಿವೈಎಸ್ಪಿ ಗಣಪತಿ K J ಜಾರ್ಜ್ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಿದ್ದರಾಮಯ್ಯ ಏನು ಮಾಡಿದರು. ನಿಮ್ಮ ಅಧಿಕಾರಾವಧಿಯಲ್ಲಿ 24 ಹಿಂದು ಕಾರ್ಯಕರ್ತರ ಕೊಲೆ ಆಯಿತು. ಆಗ ಸಿದ್ದರಾಮಯ್ಯ ಏನ್ ಮಾಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಹಿಂದೆ ಕಾಂಗ್ರೆಸ್ನ ಮಾನಸಿಕತೆ ಇದೆ, ಹಿಜಾಬ್ನ ಕಾರ್ಯಾನುಷ್ಠಾನದ ಹಿಂದೆ ಎಸ್ಡಿಪಿಐ ಇದೆ. ಇದು ಎಸ್ಡಿಪಿಐ ಮತ್ತು ಕಾಂಗ್ರೆಸ್ನ ಹುನ್ನಾರ. ಖುರಾನ್ನಲ್ಲಿ ಹಿಜಾಬ್ ಉಲ್ಲೇಖ ಇದೆಯಾ? ಇದನ್ನ ನಾನು ಸಿದ್ದರಾಮಯ್ಯಗೆ ಕೇಳುತ್ತೇನೆ ಎಂದರು.
ಕಾಂಗ್ರೆಸ್ನಲ್ಲಿ ಎರಡು ಮಾನಸಿಕತೆಗಳು ಇವೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಎನ್ನುವ ಮಾನಸಿಕತೆ ಇದೆ. ಹಿಜಾಬ್ ಬಗ್ಗೆ ಮಾತಾಡಿದರೆ ಅಲ್ಪಸಂಖ್ಯಾತ ಮತಗಳು ಹೋಗುತ್ತವೆ ಅನ್ನೋದು ಸಿದ್ದರಾಮಯ್ಯ ಚಿಂತೆ. ಕಾಂಗ್ರೆಸ್ ಮತಗಳು ಹೋಗುತ್ತವೆ ಅನ್ನೋದು ಡಿ ಕೆ ಶಿವಕುಮಾರ್ ಚಿಂತೆ. ಅದಕ್ಕಾಗಿ ಅಧಿವೇಶನದಲ್ಲಿ ಹಿಜಾಬ್ ಬಗ್ಗೆ ಕಾಂಗ್ರೆಸ್ ಚರ್ಚೆ ಮಾಡುತ್ತಿಲ್ಲ. ಹಿಜಾಬ್ ಬಗ್ಗೆ ಚರ್ಚೆ ಮಾಡಿದರೆ ಕಾಂಗ್ರೆಸ್ಗೆ ನಷ್ಟ. ಅದಕ್ಕೆ ಅವರು ಹಿಜಾಬ್ ಬಗ್ಗೆ ಮಾತನಾಡುತ್ತಿಲ್ಲ, ಮುಸ್ಲಿಮರಿಗೆ ಕಾಂಗ್ರೆಸ್ ಯಾವತ್ತೂ ಒಳ್ಳೆಯದು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣಕ್ಕೆ ಜಾತಿ ಧರ್ಮ, ದೇವರು ದಿಂಡರು ಅನ್ನೋದು ಬರಬಾರದು, ಅದಕ್ಕಾಗಿ ಸಮವಸ್ತ್ರ ಜಾರಿಯಲ್ಲಿದೆ. ಇದನ್ನ ಎಲ್ಲರೂ ಪಾಲಿಸಬೇಕು ಎಂದು ಕಟೀಲ್ ಕರೆ ನೀಡಿದರು. ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು, ಕಠಿಣ ಕ್ರಮ ಕೈಗೊಳ್ಳಬೇಕು. ಈ ಕೃತ್ಯದ ಹಿಂದೆ ಎಷ್ಟೇ ದೊಡ್ಡ ಶಕ್ತಿ ಇದ್ದರೂ ನಮ್ಮ ಸರ್ಕಾರ ಬಂಧಿಸಲಿದೆ ಎಂದು ಹೇಳಿದರು.
ಗೃಹ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಹಿಂದೆ ನಿಮ್ಮ ಸರ್ಕಾರ ಇದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಅವಾಗ ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ಕೊಟ್ಟಿಲ್ಲ..? ಹೋಗಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಆದಾಗ ಅಂದಿನ ಗೃಹ ಸಚಿವ ಜಾರ್ಜ್ ಹೆಸರು ಬರೆದಿದ್ದರು. ಇವಾಗ ನಿಮ್ಮದೇ ಶಾಸಕ ಜಮೀರ್ ಅಹಮದ್ ಮೇಲೆ ಎಫ್ಐಆರ್ ದಾಖಲಾಗಿದೆ. ಸಿದ್ದರಾಮಯ್ಯನವರೇ ಮೊದಲು ಅವರ ರಾಜೀನಾಮೆ ಪಡೀರಿ ಎಂದು ಸಚಿವ ಈಶ್ವರಪ್ಪ, ಆರಗ ಜ್ಞಾನೇಂದ್ರ ರಾಜೀನಾಮೆ ಕೇಳಿದ ಸಿದ್ದರಾಮಯ್ಯಗೆ ಕಟೀಲ್ ತೀಕ್ಷ್ಣವಾಗಿಯೇ ತಿರುಗೇಟು ನೀಡಿದರು.
ಇದನ್ನೂ ಓದಿ : ಶಿವಮೊಗ್ಗದ ಯುವಕನ ಕೊಲೆಗೂ, ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ: ಡಿಕೆಶಿ ಸ್ಪಷ್ಟನೆ
ಈಗಾಗಲೇ ಕಲಾಪ ಪ್ರಾರಂಭ ಆಗಿ ಒಂದು ವಾರ ಕಳೆದಿದೆ. ಆದರೆ ವಿಪಕ್ಷ ಕಾಂಗ್ರೆಸ್ ಜನ ವಿರೋಧಿಯಾಗಿದೆ. ಜನರ ಸಮಸ್ಯೆ, ರೈತರ ಸಮಸ್ಯೆ, ಕೊರೊನಾ ಸಮಸ್ಯೆ ಚರ್ಚೆ ಮಾಡಬೇಕಿತ್ತು. ಬಜೆಟ್ ಬಗ್ಗೆಯೂ ಚರ್ಚೆ ಮಾಡಬೇಕಿತ್ತು. ಇದುವರೆಗೂ ಯಾವುದೇ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಕಾಂಗ್ರೆಸ್ ಕೇವಲ ಕಾಲಹರಣ ಮಾಡುತ್ತಿದೆ. ಹರಿಪ್ರಸಾದ್ಗೆ ಪರಿಷತ್ ನಾಯಕರಾಗಲು ಅರ್ಹತೆ ಇಲ್ಲ, ಕೊಲೆ ಪ್ರಕರಣದಲ್ಲಿ ಹರ್ಷ ಬಜರಂಗದಳ ಕಾರ್ಯಕರ್ತ ಅಲ್ಲ ಅಂತಾರೆ.
ಹತ್ಯೆ ಯಾರ್ ಮಾಡಿದ್ದಾರೆ ಅಂತ ತನಿಖೆ ಮಾಡಲಿ. ಈಗಲೇ ಜಡ್ಜ್ ಮೆಂಟ್ ಕೊಡಲು ಇವರು ಜಡ್ಜಾ..? ತನಿಖೆ ನಡೆಸಲಿ. ಭಯೋತ್ಪಾದಕರು ಹತ್ಯೆ ಮಾಡಿದ್ದರೆ, ಅದರ ಬಗ್ಗೆ ತನಿಖೆ ಮಾಡಲಿ. ಕಾಂಗ್ರೆಸ್ ಬರೀ ಜಡ್ಜ್ ಮೆಂಟ್ ಕೊಡುತ್ತಿದೆ, ಇವರೆಲ್ಲರೂ ಜಡ್ಜ್ ಆಗಿದ್ದಾರಾ..? ಸಂವಿಧಾನದ ಚೌಕಟ್ಟಿನಲ್ಲಿ ಸದನ ನಡೆಯುತ್ತಿದ್ದು, ಇನ್ನೂ ಒಂದು ವಾರ ಇದೆ. ಸದನ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಚರ್ಚೆ ಎಲ್ಲಿಗೆ ಮುಟ್ಟುತ್ತಿದೆ ಅಂತ ಗಮನಿಸಬೇಕು. ಹೆಣ್ಮಕ್ಕಳು ಕುಂಕುಮ ಹಾಕಬಾರದು ಅನ್ನುವವರೆಗೆ ಹೋಗಿದೆ. ಇದರ ಹಿಂದೆ ಕಾಂಗ್ರೆಸ್ ಕುತಂತ್ರ ಇದೆ ಎಂದು ಆರೋಪಿಸಿದರು.
ಕಾಂಗ್ರಸ್ ವಿಧಾನಸಭೆ, ಪರಿಷತ್ನಲ್ಲಿ ಧರಣಿ ಮಾಡುತ್ತಿದೆ. ಈಶ್ವರಪ್ಪ ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ಗೆ ಶೋಭೆ ತರಲ್ಲ, ಹಿಜಾಬ್ ಸೇತರಿದಂತೆ ಇತರೆ ವಿಷಯಗಳಲ್ಲಿ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದು ಟೀಕಿಸಿದರು.
ಶಿವಮೊಗ್ಗದಲ್ಲಿ ಹರ್ಷ ಕೊಲೆ ಖಂಡನೀಯ. ಅವರ ಕೊಲೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಸರ್ಕಾರ ಕೊಲೆ ಹಿಂದಿನ ಅಪರಾಧಿಗಳ ಬಂಧನ ಶೀಘ್ರ ಮಾಡಲು ಬಿಜೆಪಿ ಆಗ್ರಹಿಸುತ್ತದೆ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಗೃಹ ಸಚಿವರು ಈ ಬಗ್ಗೆ ಕ್ರಮ ವಹಿಸುತ್ತಿದ್ದಾರೆ ಎಂದು ಹೇಳಿದರು.