ಬೆಂಗಳೂರು: ಕೋಮು ಗಲಭೆಯಲ್ಲಿ ಆರ್ಎಸ್ಎಸ್ ಮತ್ತು ಸಹ ಸಂಘಟನೆಗಳ ಪಾತ್ರ ಸಾಬೀತುಪಡಿಸಿ, ಇಲ್ಲವೇ ಬೇಷರತ್ ಕ್ಷಮೆ ಕೋರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಎಸೆದಿದ್ದಾರೆ.
ಆರ್ಎಸ್ಎಸ್ ಮತ್ತು ಅದರ ಸಹ ಸಂಘಟನೆಗಳು ಕೋಮು ಗಲಭೆಯ ಸಂದರ್ಭದಲ್ಲಿ ಆಗಿರುವ ಹಾನಿಯನ್ನು ತುಂಬಿಕೊಡುವಂತೆ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಅತಿರೇಕದಿಂದ ಕುಡಿದೆ. ಯಾವುದೇ ತನಿಖಾ ಸಂಸ್ಥೆ ಅಥವಾ ವಿಚಾರಣಾ ನ್ಯಾಯಾಲಯಗಳು ದೇಶದ ಯಾವುದೇ ಭಾಗದಲ್ಲಿ ನಡೆದ ಕೋಮು ಗಲಭೆಗಳಲ್ಲಿ ಯಾವತ್ತೂ ಆರ್ಎಸ್ಎಸ್ ಅಥವಾ ಅದರ ಸಹ ಸಂಘಟನೆಗಳು ಕಾರಣ ಎಂದು ಹೇಳಿಲ್ಲ. ಆದರೆ, ಸಿದ್ದರಾಮಯ್ಯ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಕಟೀಲ್ ಕಟು ಶಬ್ದಗಳಿಂದ ಖಂಡಿಸಿದರು.
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಿಂದ ಆದ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡುವ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಕೆಲವು ದಿನಗಳ ಹಿಂದೆ ಬರೆದಿರುವ 13 ಅಂಶಗಳನ್ನೊಳಗೊಂಡ 2 ಪುಟಗಳ ಪತ್ರದಲ್ಲಿ ಸಂಘ ಪರಿವಾರ ಈ ಹಿಂದೆ ನಡೆದಿರುವ ಕೋಮುಗಲಭೆಗಳಲ್ಲಿ ಆದ ಹಾನಿಯನ್ನು ತುಂಬಿಕೊಡುವಂತೆ ಮಾಡಬೇಕು ಎಂದು ಉಲ್ಲೇಖಿಸುವುದನ್ನು ಟೀಕಿಸಿದ್ದಾರೆ.
ಸಿದ್ದರಾಮಯ್ಯನವರು ಸಂಘಪರಿವಾರದಿಂದ ಹಾನಿ ವಸೂಲಿ ಮಾಡಬೇಕು ಎಂದು ಹೇಳುವ ಮೂಲಕ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯಲ್ಲಿ ಗಲಭೆ ಮಾಡಿದವರು ಅಲ್ಪಸಂಖ್ಯಾತರೇ ಎಂದು ಒಪ್ಪಿಕೊಂಡು ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಅಲ್ಪಸಂಖ್ಯಾತರನ್ನು ಓಲೈಸುವ ಅವರ ಪಕ್ಷದ ನೀತಿಯ ಮತ್ತು ಮತ ಬ್ಯಾಂಕ್ ರಾಜಕಾರಣದ ಭಾಗವಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ವಾಗ್ದಾಳಿ ನಡೆಸಿದ್ದಾರೆ.