ಬೆಂಗಳೂರು: ವಿಧಾನಪರಿಷತ್ ಗಲಾಟೆ ಪ್ರಕರಣ ಸಂಬಂಧ ಏಕಪಕ್ಷೀಯವಾಗಿ ಸದನ ಸಮಿತಿ ರಚನೆ ಮಾಡಲಾಗಿದ್ದು, ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸದನದಲ್ಲಿ ಚರ್ಚಿಸಿ ಸಹಮತದಿಂದ ಸದನಸಮಿತಿ ರಚನೆ ಮಾಡಬೇಕಾಗಿತ್ತು. ಆದರೆ ಸಭಾಪತಿ ಏಕಪಕ್ಷೀಯವಾಗಿ ಸಮಿತಿ ರಚನೆ ಮಾಡಿದ್ದಾರೆ. ಮರಿತಿಬ್ಬೇಗೌಡರು ಕಾಂಗ್ರೆಸ್ನಲ್ಲಿದ್ದಾರೋ, ಜೆಡಿಎಸ್ನಲ್ಲಿ ಇದ್ದಾರೋ ಗೊತ್ತಿಲ್ಲ. ಅವರನ್ನು ಸದನ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದಕ್ಕೆ ನಮ್ಮ ವಿರೋಧ ಇದೆ. ಹೀಗಾಗಿ ಎಚ್. ವಿಶ್ವನಾಥ ಹಾಗೂ ಸಂಕನೂರು ಸದನ ಸಮಿತಿಯಿಂದ ಹೊರ ಬಂದಿದ್ದಾರೆ ಎಂದರು.
ಬಿ.ಕೆ. ಹರಿಪ್ರಸಾದ್ ಗಲಾಟೆ ಮಾಡಿಸಿದವರು. ಅಂಥವರನ್ನು ಸದನ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಮರಿತಿಬ್ಬೇಗೌಡರೂ ಆ ಟೀಂನಲ್ಲಿ ಇದ್ದರು. ಹೀಗಿರುವಾಗ ಈ ಸದನ ಸಮಿತಿಯಿಂದ ನ್ಯಾಯ ನಿರೀಕ್ಷೆ ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ಪೊಲೀಸರು ಕ್ರಮ ಕೈಗೊಳ್ಳುತ್ತಾರೆ:
ಸಿಸಿಬಿಯಿಂದ ಬಂಧಿತನಾಗಿರುವ ಯುವರಾಜ್ ಜೊತೆ ಬಿಜೆಪಿ ನಾಯಕರು ಫೋಟೋ ತೆಗೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಎನ್.ರವಿಕುಮಾರ್, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ತಗೋತಾರೆ. ಸಾರ್ವಜನಿಕ ಜೀವನದಲ್ಲಿ ಇರೋರು ಫೋಟೋ ತೆಗೆಸಿಕೊಳ್ತಾರೆ. ಯಾವಾಗ ಅವರು ಫೋಟೋ ತೆಗೆಸಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸ್ ತನಿಖೆಯಲ್ಲಿ ಎಲ್ಲವೂ ಹೊರ ಬರುತ್ತದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜನಸೇವಕ ಸಮಾವೇಶಕ್ಕೆ ಸಿದ್ಧತೆ:
ಗೋ ಪೂಜೆ ಮಾಡುವ ಮೂಲಕ 30 ಜಿಲ್ಲೆಗಳಲ್ಲಿ ಜನಸೇವಕ ಸಮಾವೇಶ ಉದ್ಘಾಟನೆ ಮಾಡಲಾಗುವುದು ಎಂದು ಎನ್. ರವಿಕುಮಾರ್ ತಿಳಿಸಿದರು.
ಜ.11ರಿಂದ ಪ್ರಾರಂಭವಾಗುವ ಜನಸೇವಕ ಸಮಾವೇಶ ಬೆಂಗಳೂರಿನಲ್ಲಿ 13ಕ್ಕೆ ಸಮಾರೋಪಗೊಳ್ಳಲಿದೆ. ಜಗದೀಶ್ ಶೆಟ್ಟರ್, ಕಟೀಲ್, ಈಶ್ವರಪ್ಪ, ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ರಾಮುಲು ನೇತೃತ್ವದಲ್ಲಿ ಐದು ತಂಡಗಳು ರಾಜ್ಯ ಪ್ರವಾಸ ನಡೆಸಲಿದೆ. ಅಮಿತ್ ಶಾ ಬೆಂಗಳೂರಿಗೆ ಜ.16ಕ್ಕೆ ಆಗಮಿಸಲಿದ್ದಾರೆ. ಬಳಿಕ ಜ.17ಕ್ಕೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು ಒಂದು ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಿಂದೆಂದಿಗೂ ಆಗದಂತಹ ಗೆಲುವು ಬಿಜೆಪಿಗೆ ಆಗಿದೆ. ಕಾಂಗ್ರೆಸ್, ಜೆಡಿಎಸ್ ಟೀಕೆ ಮಾಡ್ತಿದ್ರು. ನಗರಕ್ಕೆ ಸೀಮಿತವಾದ ಪಾರ್ಟಿ ಅಂತ ಹೇಳ್ತಿದ್ರು. ಈಗ ಬಿಜೆಪಿ ಎಂಥಾ ಪಾರ್ಟಿ ಅಂತ ಗೊತ್ತಾಗಿದೆ. ಕಾಂಗ್ರೆಸ್ - ಜೆಡಿಎಸ್ ಎರಡೂ ಸೇರಿದ್ರೂ ಇಷ್ಟೊಂದು ಗ್ರಾ.ಪಂ ಸೀಟು ಗೆಲ್ಲೋದಕ್ಕೆ ಆಗಲ್ಲ. ಹೆಚ್ ಡಿ ರೇವಣ್ಣ ಕ್ಷೇತ್ರದಲ್ಲಿ ಹೆಚ್ಚುಕಡಿಮೆ ನೂರು ಸೀಟು ಗೆದ್ದಿದ್ದೇವೆ ಎಂದರು.