ಬೆಂಗಳೂರು: ನೂಪುರ್ ಶರ್ಮಾರ ಹೇಳಿಕೆ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರನ್ನು ಅತ್ಯಂತ ಭಯಾನಕವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆಗೆ ನೇರ ಕಾರಣವಾದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಬರ್ಖಾಸ್ತು ಮಾಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.
ಬಿಜೆಪಿ ನಗರ ಕಾರ್ಯಾಲಯ “ಭಾವುರಾವ್ ದೇಶಪಾಂಡೆ ಭವನ” ದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಡಿಯೋ ಮಾಡಿ ಹತ್ಯೆ ಮಾಡಲಾಗಿದೆ. ಹಂತಕರನ್ನು ಬಂಧಿಸಲಾಗಿದೆ. ಇದು ಈ ದೇಶದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಭೀಕರ ಘಟನೆಯಾಗಿದೆ. ಅಲ್ಲಿನ ಮುಖ್ಯಮಂತ್ರಿಯವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಖಂಡಿಸಿದ್ದು, ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಹಿಂದುಗಳು ಬಿಟ್ಟಿಯಾಗಿ ಸಿಗುತ್ತಾರಾ?: ಹಿಂದುಗಳು ಬಿಟ್ಟಿಯಾಗಿ ಸಿಗುತ್ತಾರಾ? ಸೆಕ್ಯುಲರ್ನ ಪರಮೋಚ್ಛ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಈ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು. ನಿಮ್ಮ ಸೆಕ್ಯುಲರಿಸಂ, ನ್ಯಾಷನಾಲಿಟಿ ಎಲ್ಲಿ ಹೋಗಿದೆ. ಅದನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಡವಿಟ್ಟಿದ್ದೀರಾ? ಎಂದು ಕೇಳಿದರು.
ಕಾಂಗ್ರೆಸ್ಗೆ ಬಿಜೆಪಿ ಪ್ರಶ್ನೆಗಳು:
- ನೀವು ರಾಷ್ಟ್ರೀಯ ಕಾಂಗ್ರೆಸ್ ಎನ್ನುತ್ತೀರಿ. ನೀವು ಕೆಎಫ್‍ಡಿ, ಎಸ್‍ಡಿಪಿಐ ಮತ್ತು ಪಿಎಫ್‍ಐಯ 1,600 ಜನರ ಮೇಲಿದ್ದ 175 ಪ್ರಕರಣಗಳನ್ನು ಯಾಕೆ ರದ್ದುಪಡಿಸಿದಿರಿ?
- ಹರ್ಷನ ಹತ್ಯೆ ಮಾಡಿದ ಕತ್ತಿ, ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿದ ಕತ್ತಿ, ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಮಾಡಿದ ಕತ್ತಿ- ಈ ಮೂರೂ ಒಂದೇ ಅಲ್ಲವೇ? ಈ ಕತ್ತಿಯ ಕೊಡುಗೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಕಾಂಗ್ರೆಸ್‍ನದಲ್ಲವೇ? (ಯಾಕೆಂದರೆ ಕಾಶ್ಮೀರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಉದಯಪುರದಲ್ಲೂ ಕಾಂಗ್ರೆಸ್ ಆಡಳಿತದಲ್ಲಿದೆ. ಹರ್ಷನ ಹತ್ಯೆ ನೀವು ಬೆಂಬಲಿಸಿದವರ ಕೊಡುಗೆಯಾಗಿದೆ)
- ನೀವೇ ಬೆಳೆಸಿದ ತುಷ್ಟೀಕರಣದ ನೀತಿ ಭಯೋತ್ಪಾದನಾ ಕುಕೃತ್ಯಕ್ಕೆ ಕಾರಣವಾಗಿದೆ. ಐಸಿಸ್ ನಮ್ಮ ದೇಶದಲ್ಲೂ ಬೆಳೆಯಲು ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬ್ರದರ್ಗೆ ಕತ್ತಿ ಕಂಡರೆ ಪ್ರೀತಿ ಮತ್ತು ತಿಲಕ ಕಂಡರೆ ಭಯವೇ? ತಿಲಕ ಹಾಕಿದವರು ನಿಮಗೆ ಬ್ರದರ್ ಅಲ್ಲವೇ?
- ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಒಂದು ವಾರ ಕಾಲ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್‍ನ ಧೋರಣೆಯನ್ನು ನಾವು ಖಂಡಿಸಲಿದ್ದೇವೆ ಎಂದು ರವಿಕುಮಾರ್ ಹೇಳಿದರು.