ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರ ಕೆಂಪಣ್ಣ ಮಾಡಿರುವ ಆರೋಪ ಆಧಾರರಹಿತವಾಗಿದ್ದು, ಅದಕ್ಕೆ ಮಹತ್ವ ಕೊಡಬೇಕಿಲ್ಲ. ಪ್ರತಿ ನಿತ್ಯ ಸಾವಿರಾರು ಪತ್ರ ಪ್ರಧಾನಿ ಕಚೇರಿಗೆ ಹೋಗುತ್ತದೆ. ಕರಿಯಣ್ಣ, ಬಿಳಿಯಣ್ಣ ಎಲ್ಲರ ಪತ್ರವೂ ಹೋಗುತ್ತದೆ ಹಾಗೆ ಕೆಂಪಣ್ಣನ ಪತ್ರವೂ ಹೋಗಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಂಪಣ್ಣ ಸಿದ್ದರಾಮಯ್ಯ ಮನೆಯಲ್ಲೇ ಸುದ್ದಿಗೋಷ್ಟಿ ನಡೆಸಿರುವುದರಿಂದ ಇದರ ಗಾಂಭೀರ್ಯತೆ ಎಷ್ಟಿದೆ ಅಂತಾ ಗೊತ್ತಾಗುತ್ತದೆ. ಹಿಂದಿನಂತೆಯೇ ತಳ ಬುಡ ಇಲ್ಲದ ಆರೋಪ ಮಾಡಿದ್ದಾರೆ. ಅವರು ದಾಖಲೆಗಳನ್ನು ಕೊಡಲು ಸಿದ್ಧವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇಲ್ಲ. ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಿಕೆಗಳ ಝೆರಾಕ್ಸ್ ಕಾಪಿ ಎಂದು ಜರಿದರು.
ಪ್ರತಿ ನಿತ್ಯ ಸಾವಿರಾರು ಪತ್ರಗಳು ಪ್ರಧಾನಿ ಅವರ ಕಚೇರಿಗೆ ಹೋಗುತ್ತವೆ. ಕರಿಯಣ್ಣ, ಬಿಳಿಯಣ್ಣ ಎಲ್ಲರ ಪತ್ರವೂ ಹೋಗುತ್ತದೆ. ಅದೇ ರೀತಿ ಕೆಂಪಣ್ಣನ ಪತ್ರವೂ ಹೋಗಲಿ. ಕೆಂಪಣ್ಣ ಆರೋಪಕ್ಕೆ ಗಂಭೀರತೆಯೇ ಉಳಿದಿಲ್ಲ. ನಮಗೆ ಮುಜುಗರದ ಪ್ರಶ್ನೆಯೇ ಇಲ್ಲ ನಮ್ಮಲ್ಲಿ ಪರ್ಸಂಟೇಜ್ ಇಲ್ಲ, ಅದು ಕಾಂಗ್ರೆಸ್ ನಲ್ಲಿ ಮಾತ್ರ ಇರೋದು ಎಂದು ರವಿಕುಮಾರ್ ತಿರುಗೇಟು ನೀಡಿದರು.
ಇದನ್ನೂ ಓದಿ : ಮುಖ್ಯಮಂತ್ರಿ ಸೇರಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ
ಸಿಎಂ ಅವರೇ ಕೆಂಪಣ್ಣ ಅವರನ್ನು ಕರೆಸಿ ಆಧಾರ ಕೊಡಿ ಅಂದಿದ್ದರು. ಆದರೂ ಅವರು ದಾಖಲೆ ಕೊಟ್ಟಿರಲಿಲ್ಲ. ಈಗ ಪೇಪರ್ನಲ್ಲಿ, ಟಿವಿಗಳಲ್ಲಿ ಬರಬೇಕು ಅಂತ ಸುದ್ದಿಗೋಷ್ಟಿ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಪರ್ಸೆಂಟೇಜ್ ಪ್ರಶ್ನೆಯೇ ಬರಲ್ಲ. ಪರ್ಸೆಂಟೇಜ್ ಎಲ್ಲ ಇರೋದು ಕಾಂಗ್ರೆಸ್ನವರಲ್ಲಿ ಮಾತ್ರ ಎಂದು ದೂರಿದರು.
ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಮಯ ಇದೆ. ಸರ್ಕಾರ ಗಣೇಶೋತ್ಸವಕ್ಕೆ ಅನುಮತಿ ಕೊಡುವ ವಿಶ್ವಾಸ ಇದೆ. ಚಾಮರಾಜಪೇಟೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಕು ಅನ್ನೋದಕ್ಕೆ ಪಕ್ಷದ ಆಗ್ರಹವೂ ಇದೆ. ಮೈದಾನದಲ್ಲಿ ರಾಷ್ಟ್ರಧ್ವಜ ಹಾರ್ತಿರ್ಲಿಲ್ಲ, ಈಗ ಹಾರುತ್ತಿದೆ. ಇದೂ ಒಂದು ಸಾಧನೆಯೇ ಅಲ್ವಾ? ಎಂದರು.
ಇದನ್ನೂ ಓದಿ : ಕಮಿಷನ್ ಆರೋಪ: ಲೋಕಾಯುಕ್ತಕ್ಕೆ ದೂರು ಕೊಡಲಿ, ತನಿಖೆಯಾಗಲಿ ಎಂದ ಸಿಎಂ ಬೊಮ್ಮಾಯಿ