ಬೆಂಗಳೂರು: ನಾನು ಶುದ್ಧ ಚಾರಿತ್ರ್ಯ ಉಳ್ಳವನು ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನುಬಾಹಿರವಾಗಿ ಮಾಡಿಕೊಂಡಿರುವ ಭೂ ಹಗರಣಕ್ಕೆ ಸಂಬಂಧಿಸಿದಂತೆ ನೇರ ಉತ್ತರ ನೀಡಲಿ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್ ರಮೇಶ್ ಸವಾಲು ಹಾಕಿದರು.
ನಗರದಲ್ಲಿಂದು ಮಲ್ಲೇಶ್ವರದ ಭಾವುರಾವ್ ದೇಶಪಾಂಡೆ ಭವನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ತಮ್ಮ ಶಿಷ್ಯನ ಮೂಲಕ ಡಿ ನೋಟಿಫಿಕೇಶನ್ ಮಾಡಿದ್ದಾರೆ. ಈ ಕುರಿತು ಅವರು ಚರ್ಚೆಗೆ ಬರಲಿ ಎಂದರು.
1997 ರಂದು ಮೈಸೂರು ವಿಜಯನಗರ 2ನೇ ಹಂತದಲ್ಲಿರುವ ಸರ್ವೆ ಸಂಖ್ಯೆ 70, 4ಎ ರ 9,600 ಚ. ಅಡಿ ವಿಸ್ತೀರ್ಣದ ನಿವೇಶನ ಖರೀದಿ ಮಾಡಿರುವುದು ನಿಜವೇ ಅಥವಾ ಸುಳ್ಳೇ. ಹಾಗೇ ಕೇವಲ 6,72,000 ರೂಪಾಯಿಗಳಿಗೆ ಈ ನಿವೇಶನ ಖರೀದಿಸಲಾಗಿದಿಯೇ? ಎಂದು ಅವರು ಕೇಳಿದರು.
6 ವರ್ಷಗಳಲ್ಲಿ 1 ಕೋಟಿ ರೂ.ಗೆ ನಿವೇಶನ ಮಾರಾಟ: ಖರೀದಿ ಮಾಡಿದ ಕೇವಲ 6 ವರ್ಷಗಳಲ್ಲಿ ಅಂದರೆ 2003 ರಂದು ಇದನ್ನು 1 ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದು ನಿಜವೇ ಅಥವಾ ಸುಳ್ಳೇ. ವಾಸ್ತವದಲ್ಲಿ ನೀವು ಖರೀದಿ ಮಾಡಿದ್ದ ಸರ್ವೆ ಸಂಖ್ಯೆ 70/4ಎ ಇನಕಲ್ ಗ್ರಾಮದ ಸಾಕಮ್ಮ ಎಂಬುವವರಿಗೆ ಸೇರಿದ್ದ ಈ ಜಮೀನನ್ನು ನೀವು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಡಿ ನೋಟಿಫಿಕೇಶನ್ ಮಾಡಿಸಿಕೊಂಡು ಖರೀದಿ ಮಾಡಿರುವ ಮರ್ಮವೇನು?.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿಮ್ಮ ಆಪ್ತ ಸಿ ಬಸವೇಗೌಡ ಅಕ್ರಮವಾಗಿ 1997 ರಂದು ಹತ್ತು ಗುಂಟೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿರುವುದು ನಿಜವೇ ಅಥವಾ ಸುಳ್ಳೇ. ನಿಯಮ ಬಾಹಿರವಾಗಿ ಡಿ ನೋಟಿಫಿಕೇಶನ್ ಮಾಡಿದ ಇಪ್ಪತ್ತೇಳನೇ ದಿನ ನೀವು ಇದನ್ನು ಖರೀದಿ ಮಾಡಿರುವುದು ನಿಜವೇ ಅಥವಾ ಸುಳ್ಳೇ ಎಂದು ಉತ್ತರಿಸಬೇಕು.
ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನೀವು ಒತ್ತಡ ಹೇರಿ ಈ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿಸಿಕೊಂಡಿರುವುದು ನಿಜವಲ್ಲವೇ? ಈ ಸರ್ವೆ ಸಂಖ್ಯೆಯ ಜಮೀನಿಗೆ ಮುಡಾ ವಿಶೇಷ ಭೂಸ್ವಾಧೀನಾಧಿಕಾರಿ ಮಾಲೀಕರಿಗೆ ದಿನಾಂಕ 1985 ರಂದು ಅವಾರ್ಡ್ ಜಾರಿ ಮಾಡಿರುವುದು ನಿಮಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಮನೆಗಳನ್ನು ಕೆಡವಿ ಬಂಗಲೆ ನಿರ್ಮಾಣ: ಈ ಜಮೀನನ್ನು ಮುಡಾ ವಶಪಡಿಸಿಕೊಂಡ ನಂತರ ವಿಜಯನಗರ 2ನೇ ಹಂತ ಬಡಾವಣೆ ನಿರ್ಮಿಸಿ ಇದೇ ಜಾಗದಲ್ಲಿ ನಿವೇಶನಗಳ ಸಂಖ್ಯೆಯ 3160, 3161, 3162, 3163 ನಿವೇಶನಗಳನ್ನಾಗಿ ವಿಂಗಡಿಸಿ ಈ ನಿವೇಶನಗಳನ್ನು ಹಂಚಿಕೆ ಮಾಡಿದ ನಂತರ, ಅದರಲ್ಲೂ ನಿವೇಶನ ಸಂಖ್ಯೆ 3161 ರಲ್ಲಿ ಸುಂದರ್ ರಾಜ್ ಎಂಬುವವರು ಮನೆ ಕಟ್ಟಿಕೊಂಡು ಮುಡಾ ವತಿಯಿಂದ ನಕ್ಷೆ ಮಂಜೂರಾತಿಯನ್ನು ಪಡೆದುಕೊಂಡಿದ್ದರೂ ಸಹ ನೀವು ಕಾನೂನು ಬಾಹಿರವಾಗಿ ಡಿ ನೋಟಿಫಿಕೇಶನ್ ಮಾಡಿಸಿ ನಿಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡು ನಂತರ ಈ ಮನೆಗಳನ್ನು ಕೆಡವಿ ಹಾಕಿ ನಿಮ್ಮ ಬಂಗಲೆ ಕಟ್ಟಿಕೊಂಡಿದ್ದು ನಿಜವಲ್ಲವೇ ಎಂದು ರಮೇಶ್ ಕೇಳಿದರು.
ಅಂದಿನ ಮುಡಾ ಆಯುಕ್ತರು 1995 ರಂದು ಈ ಸರ್ವೆ ನಂಬರ್ 70/4ಎ ನಲ್ಲಿ ಬಡಾವಣೆ ನಿರ್ಮಾಣ ಮಾಡಿ, ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದ ಈ ಜಮೀನನ್ನು ಡಿ ನೋಟಿಫಿಕೇಶನ್ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಆದೇಶ ಮಾಡಿರುವುದನ್ನು ನೀವು ಮುಚ್ಚಿಟ್ಟಿದ್ದು ಸರಿಯೇ? ಎಂದು ಪ್ರಶ್ನಿಸಿದರು.
ನಿಮ್ಮ ಆಪ್ತ ಹಾಗೂ ಆಗಿನ ಮುಡಾ ಅಧ್ಯಕ್ಷ ಸಿ ಬಸವೇಗೌಡ ಕಡತವನ್ನು ತರಾತುರಿಯಲ್ಲಿ ತರಿಸಿ ಡಿ ನೋಟಿಫಿಕೇಶನ್ ಮಾಡಿಸಿಕೊಟ್ಟಿರುವುದು ಈಗ ದಾಖಲೆಗಳ ಸಹಿತ ಜಗಜ್ಜಾಹೀರಾಗಿದೆ. ಇದಕ್ಕೆ ಏನು ಹೇಳುತ್ತೀರಿ ಎಂದು ಸವಾಲು ಹಾಕಿದರು.
ಡಿ ನೋಟಿಫಿಕೇಶನ್ಗೆ ಸಂಬಂಧಿಸಿದ ಕಡತದ ಅನುಮೋದನೆಗೆಂದು ರಾಜ್ಯ ಸರ್ಕಾರಕ್ಕೆ ಕಳುಹಿಸದೆಯೇ ನೇರವಾಗಿ ಮುಡಾದಿಂದಲೇ ಡಿ ನೋಟಿಫಿಕೇಶನ್ ಮಾಡಿಸಿರುವುದು ಕಾನೂನು ಬಾಹಿರ ಕಾರ್ಯವಲ್ಲವೇ. ಸಿದ್ದರಾಮಯ್ಯ ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಮಾಡಲಿ ಎಂದು ಸವಾಲು ಹಾಕಿದರು. ಬಿಜೆಪಿ ರಾಜ್ಯ ವಕ್ತಾರ ಮಹೇಶ್ ಸೇರಿದಂತೆ ಪ್ರಮುಖರು ಮಾಧ್ಯಮಗೋಷ್ಟಿಯಲ್ಲಿ ಇದ್ದರು.
ಇದನ್ನೂ ಓದಿ: ಪ್ರಭಾವಿ ಹುದ್ದೆಗೆ ಅಕ್ರಮ ನೇಮಕಾತಿ: ಸಿದ್ದರಾಮಯ್ಯ ವಿರುದ್ಧ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು