ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿರುವ ಆರೋಪದ ಮೇರೆಗೆ ಮಾಜಿ ಡಾನ್ ದಿ. ಮುತ್ತಪ್ಪ ರೈ ಮಗ ರಿಕ್ಕಿ ರೈ ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ತಲಾಷ್ ನಡೆಸಿ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಟೀಂ ಸೂಚಿಸಿತ್ತು.
ಹೀಗಾಗಿ ಸದ್ಯ ಚಾಮಾರಾಜಪೇಟೆಯ ಸಿಸಿಬಿ ಕಚೇರಿಗೆ ರಿಕ್ಕಿ ಆಗಮಿಸಿದ್ದು, ಇನ್ಸ್ಪೆಕ್ಟರ್ ಪುನೀತ್ ನೇತೃತ್ವದ ತಂಡ ರಿಕ್ಕಿ ರೈ ವಿಚಾರಣೆ ನಡೆಯಲಿದೆ. ನಿನ್ನೆ ದಾಳಿ ನಡೆಸಿದ ವೇಳೆ ಎರಡು ಮೊಬೈಲ್, ಹಾರ್ಡ್ ಡಿಸ್ಕ್ ವಶಪಡಿಸಿಕೊಂಡಿದ್ದು, ಅದರ ಆಧಾರದ ಮೇರೆಗೆ ತನಿಖೆ ಮುಂದುವರೆದಿದೆ. ಈಗಾಗಲೇ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವಗೆ ಸಹಾಯ ಮಾಡಿರುವ ಕುರಿತು ಮಾಹಿತಿ ಪಡೆಯಲಿದ್ದಾರೆ ಎನ್ನಲಾಗ್ತಿದೆ.
ರಿಕ್ಕಿ ರೈ ಹಾಗೂ ಆದಿತ್ಯ ಆಳ್ವ ಬಾಲ್ಯ ಸ್ನೇಹಿತರಾಗಿದ್ದಾರೆ. ಹಾಗೆ ಸದಾಶಿವನಗರ ಬಳಿ ಅಕ್ಕ-ಪಕ್ಕ ಮನೆಯನ್ನು ಹೊಂದಿದ್ದಾರೆ. ಹಾಗೆ ಆದಿತ್ಯ ಆಳ್ವ ಮತ್ತು ರಿಕ್ಕಿ ಅಪಾರ್ಟ್ಮೆಂಟ್ನಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಹೇಳಲಾಗ್ತಿದೆ.
ಈ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಆಗಿರುವ ಗುಮಾನಿ ಸಿಸಿಬಿಗೆ ಇದ್ದು, ಸದ್ಯ ಇದೆಲ್ಲಾ ಆಧಾರದ ಮೇರೆಗೆ ತನಿಖೆ ಮುಂದುವರೆಯಲಿದೆ. ಕಾಟನ್ಪೇಟೆಯಲ್ಲಿ ಆದಿತ್ಯ ಆಳ್ವನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.