ಬೆಂಗಳೂರು: ಮಾಜಿ ಭೂಗತ ದೊರೆ ಇಂದು ಇಹಲೋಕ ತ್ಯಜಿಸಿದ್ದಾರೆ ಇವರ ಜೀವನ ಪಯಣ ಪ್ರತಿಯೊಬ್ಬರ ಎದೆಯನ್ನೂ ನಡುಗಿಸುವಷ್ಟು ದೊಡ್ಡದಾಗಿದೆ.
ಹೌದು.., ಭೂಗತ ಲೋಕವನ್ನೇ ಆಳುತ್ತಿದ್ದ ಮುತ್ತಪ್ಪ ರೈ ತಮ್ಮ ಭೂಗತ ಲೋಕದ ಸಂಪರ್ಕ ಬಿಟ್ಟು ಬಿಡದಿ ಬಳಿ ವಾಸವಾಗಿದ್ರು. ರೈ ಹಿನ್ನೆಲೆ ನೋಡೋದಾದ್ರೆ ಇವರ ಮೂಲ ಹೆಸರು ನೆಟ್ಟಾಳ ಮುತ್ತಪ್ಪ ಎಂದು. ಉದ್ಯಮಿಯಾಗಿಯೇ ಹೆಚ್ಚು ಚಿರಪರಿಚಿತರಾಗಿದ್ದರು. ಮೂಲತಃ ಪುತ್ತೂರಿನವರಾದ ಮುತ್ತಪ್ಪ ರೈ, ಮೇ. 1ರಂದು ಜನಿಸಿದ್ದರು. ತಂದೆ ನೆಟ್ಟಾಳ ನಾರಾಯಣ ರೈ ಹಾಗೂ ತಾಯಿ ಸುಶೀಲಾ ರೈ, ಪತ್ನಿ ರೇಖಾ ಮುತ್ತಪ್ಪ ರೈ ಹಾಗೂ ರಾಖಿ, ರಿಕ್ಕಿ ಎಂಬ ಇಬ್ಬರು ಮಕ್ಕಳ ಸಂಸಾರ ಇವರದು.
ಪತ್ನಿ ಸಾವು:
2013 ರಲ್ಲಿ ಮುತ್ತಪ್ಪ ರೈ ಪತ್ನಿ ರೇಖಾ ಎಲಿಜಬೆತ್ ಆಸ್ಪತ್ರೆಯಲ್ಲಿ ನಿಧನರಾದ್ರು. ತದ ನಂತರ ರೈ ಅನಿವಾರ್ಯವಾಗಿ ಎರಡನೇ ಮದುವೆಯಾದರು. ಕೇವಲ ಉದ್ಯಮಿ ಅಷ್ಟೇ ಅಲ್ಲದೆ ತುಳು ಚಿತ್ರದಲ್ಲೂ ಕಾಣಿಸಿಕೊಂಡಿದ್ದ ಮುತ್ತಪ್ಪ ರೈ, ಕಂಚಿಲ್ದ ಬಾಲೆ ಅನ್ನೋ ಸಿನಿಮಾದಲ್ಲಿ ನಟಿಸಿದ್ರು. ನಂತ್ರ ಜಯ ಕರ್ನಾಟಕ ಸಂಘಟನೆ ಹುಟ್ಟುಹಾಕಿದ್ದ ಇವರು, ಸಹಸ್ರಾರು ಜನರಿಗೆ ಸಂಘಟನೆ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಕೇವಲ ಲಾಭಕ್ಕೋಸ್ಕರ ಕೆಲಸ ಮಾಡದೆ ಜನರಿಗೋಸ್ಕರ ಅಂತಲೇ ಜಯ ಕರ್ನಾಟಕ ಸಂಘಟನೆ ಶುರು ಮಾಡಲಾಗಿತ್ತು. ಮುತ್ತಪ್ಪ ರೈ ಸಿನಿಮಾ, ಉದ್ಯಮಿ, ಸಂಘಟನೆಯ ಅಧ್ಯಕ್ಷ್ಷ ಅನ್ನುವುದರ ಹೊರತಾಗಿಯೂ ಕ್ರಿಮಿನಲ್ ಪಟ್ಟಿಯಲ್ಲಿ ದಾಖಲೆ ಬರೆದಿದ್ದರು. ಕರ್ನಾಟಕ ಪೊಲೀಸರು ಮುತ್ತಪ್ಪ ರೈ ಮೇಲೆ 8 ಕೊಲೆ ಕೇಸ್ ಸಂಬಂಧ ವಾರೆಂಟ್ ಹೊರಡಿಸಿದ್ದರು. 2001ರಲ್ಲಿ ಉದ್ಯಮಿ ಸುಬ್ಬರಾಜು ಕೊಲೆ ಮಾಡಿದ್ದ ಕೇಸ್ ಕೂಡ ಮುತ್ತಪ್ಪ ರೈ ಮೇಲಿತ್ತು.
ತೀವ್ರ ವಿಚಾರಣೆ :
2002ರಲ್ಲಿ ದುಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮುತ್ತಪ್ಪ ರೈ ಅವರನ್ನು ಭಾರತಕ್ಕೆ ಕರೆ ತರಲಾಗಿತ್ತು. ಸಿಬಿಐ(ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್), ರಿಸರ್ಚ್ ಹಾಗೂ ಅನಾಲಿಸಿಸ್ ಇಲಾಖೆ, ಇಂಟೆಲಿಜೆನ್ಸ್ ಟೀಂ ಹಾಗೂ ಕರ್ನಾಟಕ ಪೊಲೀಸರು ಇವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದರು. ಹಲವಾರು ಭೂ ವಿವಾದ ಹಾಗೂ ಕೆಲ ನಕಲಿ ದಾಖಲೆ ಸೃಷ್ಟಿಸಿ ದೋಖಾ, ಹೌಸಿಂಗ್ ಬೋರ್ಡ್ನಿಂದ ಲಂಚ ಸ್ವೀಕಾರ. ಅಲ್ಲದೆ, ಕೆಲ ರೌಡಿಗಳ ಜೊತೆ ಲಿಂಕ್ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಜೊತೆಗಿನ ಲಿಂಕ್ ಆಧಾರದ ಮೇಲೆ ಇಷ್ಟೂ ಇಲಾಖೆಯಿಂದ ತನಿಖೆ ಕೈಗೊಳ್ಳಲಾಗಿತ್ತು.
ಸಿನಿಮಾಗೆ ಎಂಟ್ರಿ :
ಇದಾದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ರೈ ಸಿನಿಮಾ ಮಾಡಲು ಮುಂದಾದರು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ರೈ ಅನ್ನೋ ಸಿನಿಮಾ ನಿರ್ದೇಶನ ಮಾಡಿದ್ರು. ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಮಾಡಿದ್ದ ವರ್ಮಾ ಮಂಗಳೂರು, ಬೆಂಗಳೂರು, ಮುಂಬೈ, ದುಬೈ ಹಾಗೂ ಲಂಡನ್ನಲ್ಲಿ ಚಿತ್ರೀಕರಿಸಿದ್ದರು. ಇದಾದ ನಂತರ ಇವರ ಆರೋಗ್ಯದಲ್ಲಿ ತೀವ್ರಗತಿಯಲ್ಲಿ ಏರುಪೇರು ಉಂಟಾಯಿತು. ಇತ್ತೀಚೆಗೆ ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಿದ ವೇಳೆ ಮುತ್ತಪ್ಪ ರೈಗೆ ನಂಟು ಇದ್ದ ಹಿನ್ನೆಲೆ ರೈ ಅವರ ಮನೆಗೆ ತೆರಳಿ ಅಧಿಕಾರಿಗಳು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
ಮುತ್ತಪ್ಪ ರೈ ಹಲವಾರು ವಿಧದಲ್ಲಿ ಜನರಿಗೆ ಸಹಕಾರ ಮಾಡಿದ್ದಾರೆ. ಆದರೆ, ಬೊಂಬೆ ಆಡ್ಸೋನು ಮೇಲೆ ಕುತೋನು ಎಂಬಂತೆ ರೈ 68ರ ವಯಸ್ಸಲ್ಲೇ ಮಾರಕ ಕ್ಯಾನ್ಸರ್ಗೆ ತುತ್ತಾಗಿ, ಅದನ್ನು ಗೆಲ್ಲಲಾಗದೇ ಬದುಕಿನಿಂದ ಹೊರಕ್ಕೆ ಹೆಜ್ಜೆ ಹಾಕಿದ್ದಾರೆ.