ಬೆಂಗಳೂರು: ಪೋಕ್ಸೋ ಮತ್ತು ಜಾತಿ ನಿಂದನೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘ ರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಮಠದ ಬ್ಯಾಂಕ್ ಖಾತೆಗಳ ಚೆಕ್‌ಗಳಿಗೆ ಸಹಿ ಹಾಕುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಮಠದ ಬ್ಯಾಂಕ್ ಖಾತೆಗಳ ಚೆಕ್‌ಗಳಿಗೆ ಸಹಿ ಹಾಕುವುದಕ್ಕೆ ಅವಕಾಶ ನೀಡಲು ನಿರಾಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದು ಮಾಡಬೇಕು ಎಂದು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ಮಠ ಹಾಗೂ ವಿದ್ಯಾಪೀಠದ ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡುವ ಅಥವಾ ಹಣಕಾಸಿನ ವಿಚಾರದಲ್ಲಿ ಆಡಳಿತ ಮಂಡಳಿಯ ಪಾತ್ರವಿಲ್ಲ. ಮಠ ಅಥವಾ ವಿದ್ಯಾಪೀಠದ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಅಧಿಕಾರ ಆಡಳಿತ ಮಂಡಳಿಗೆ ಇಲ್ಲ. ಹಣಕಾಸಿನ ವಿಚಾರ ಹಾಗೂ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರ ಅರ್ಜಿದಾರರಿಗೆ ಮಾತ್ರ ಇದೆ.
ಮಠ ಮತ್ತು ವಿದ್ಯಾಪೀಠದಲ್ಲಿ ಸುಮಾರು ಮೂರು ಸಾವಿರ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಪಿ ಸ್ವಾಮೀಜಿ ಅವರು ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅನುಮತಿಸದಿದ್ದರೆ ಸಿಬ್ಬಂದಿಗೆ ವೇತನ ಪಾವತಿಯಾಗುವುದಿಲ್ಲ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗಲಿದೆ. ಕರ್ನಾಟಕ ಕಾರಾಗೃಹ ಕಾಯಿದೆ 1963ರ ಸೆಕ್ಷನ್ 40ರ ಅಡಿ ಅರ್ಜಿದಾರರು ವಿಚಾರಣಾಧೀನ ಕೈದಿಯಾಗಿದ್ದು, ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.