ಬೆಂಗಳೂರು : ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ ಫಾರ್ವರ್ಡ್ ಸಂದೇಶವೊಂದನ್ನು ಸ್ವತಃ ತಮ್ಮದೇ ವಾಟ್ಸ್ ಆ್ಯಪ್ ಮಾಧ್ಯಮ ಗ್ರೂಪಿಗೆ ಹಾಕುವ ಮೂಲಕ ಶಾಸಕ ಮುರುಗೇಶ್ ನಿರಾಣಿ ಎಡವಟ್ಟು ಮಾಡಿಕೊಂಡಿದ್ದು ಇದೀಗ ವಿವಾದವಾಗುತ್ತಿರುವ ಬೆನ್ನಲ್ಲೇ ತಮ್ಮ ವಿರುದ್ಧದ ಆರೋಪ ಸತ್ಯಕ್ಕೆ ದೂರ ಎಂದು ಸ್ಪಷ್ಟೀಕರಣ ನೀಡಿ ರಾಜ್ಯದ ಜನತೆಯ ಕ್ಷಮೆಯಾಚಿಸಿದ್ದಾರೆ.
ಮುರುಗೇಶ್ ನಿರಾಣಿ ಅವರ ಮಾಧ್ಯಮ ಸಂಪರ್ಕಕ್ಕೆ ವಾಟ್ಸ್ಆ್ಯಪ್ ಗ್ರೂಪ್ ರಚಿಸಲಾಗಿದೆ. ಇಂದು ಬೆಳಗ್ಗೆ ಹಿಂದೂ ದೇವರ ಬಗ್ಗೆ ಅವಹೇಳನ ಮಾಡುವ ರೀತಿಯ ಸಂದೇಶವನ್ನು ನಿರಾಣಿ ಅವರೇ ಪೋಸ್ಟ್ ಮಾಡಿದ್ದರು. ಅದು ಫಾರ್ವರ್ಡ್ ಸಂದೇಶವಾಗಿದ್ದು, ಸರಿಯಾಗಿ ಗಮನಿಸದೇ ಈ ಗ್ರೂಪ್ಗೆ ಫಾರ್ವರ್ಡ್ ಮಾಡಿ ನಿರಾಣಿ ಪೇಚಿಗೆ ಸಿಲುಕಿದ್ದಾರೆ. ಈ ಸಂದೇಶ ನಿರಾಣಿ ಪೋಸ್ಟ್ ಮಾಡುತ್ತಿದ್ದಂತೆ ಗ್ರೂಪ್ನಲ್ಲಿದ್ದ ಸಚಿವ ಸುರೇಶ್ ಕುಮಾರ್ ತಕ್ಷಣವೇ ಲೆಫ್ಟ್ ಆಗಿದ್ದಾರೆ. ಇದರಿಂದ ಎಚ್ಚೆತ್ತ ಶಾಸಕ ಮುರುಗೇಶ್ ನಿರಾಣಿ ಅಚಾತುರ್ಯ ಗಮನಿಸಿ ಸ್ಪಷ್ಟೀಕರಣ ನೀಡಿದ್ದಾರೆ.
ಸ್ಪಷ್ಟೀಕರಣದ ವಿವರ : ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿ ಸಂದೇಶವೊಂದನ್ನು ಮಾಧ್ಯಮ ಗುಂಪಿಗೆ ರವಾನಿಸಿದ್ದಾರೆ ಎಂದು ಬರುತ್ತಿರುವುದು ಸತ್ಯಕ್ಕೆ ದೂರವಾಗಿದೆ. ನಾನು ಯಾವುದೇ ಮಾಧ್ಯಮ ಗುಂಪಿಗೆ ಇಂತಹ ಮೆಸೇಜನ್ನು ರವಾನಿಸಿಲ್ಲ, ನನ್ನ ಶುಗರ್ಸ್ ಕಂಪನಿ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಯಿಂದ ಸಿಬ್ಬಂದಿಯೊಬ್ಬರು ಅಚಾತುರ್ಯದಿಂದ ಫಾರ್ವರ್ಡ್ ಮೆಸೇಜನ್ನು ರವಾನಿಸುತ್ತಾರೆ, ಇದು ಸ್ವಯಂ ರಚಿತ ಮೆಸೇಜ್ ಅಲ್ಲ. ಈ ಕೃತ್ಯಕ್ಕೆ ಸಿಬ್ಬಂದಿ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ನನಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಇತರ ಎಲ್ಲ ಧರ್ಮಗಳ ದೇವರುಗಳು ಹಾಗೂ ನಂಬಿಕೆಗಳ ಬಗ್ಗೆ ಅತೀವ ಶೃದ್ಧೆ, ಭಕ್ತಿ ಇದೆ. ಈ ಘಟನೆಯಿಂದ ನನ್ನ ಮನಸ್ಸಿಗೆ ಅತೀವ ನೋವುಂಟಾಗಿದೆ. ಇದರಿಂದ ಯಾರದೇ ನಂಬಿಕೆ ನೋವುಂಟಾಗಿದ್ದಲ್ಲಿ ನಾನು ರಾಜ್ಯದ ಜನತೆಯ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ ದೇವರ ಪೂಜೆ ಮಾಡಿ ನಾನು ನೀರು ಹಾಗೂ ಆಹಾರ ಸೇವಿಸುವುದಿಲ್ಲ. ನನ್ನ ಸಿಬ್ಬಂದಿಯೊಬ್ಬರು ಮಾಡಿದ ಅವಘಡಕ್ಕೆ ನಾನು ಮತ್ತೊಮ್ಮೆ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಸಂಗ ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.