ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲು ನಾವು ಕೂಡ ಆಕಾಂಕ್ಷಿಯಾಗಿದ್ದೇವೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಅಪೇಕ್ಷೆ ಎಲ್ಲರಿಗೂ ಇರುವಂತೆ ನನಗೂ ಇದೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಅದಕ್ಕಾಗಿ ಒತ್ತಾಯ ಮಾಡುವುದಿಲ್ಲ. ಮುಖ್ಯಮಂತ್ರಿ ಅವರ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಆದ್ರೆ ಅವಕಾಶ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಗೆದ್ದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿಯನ್ನು ಕೈಬಿಡುವುದು ಒಳ್ಳೆಯದಲ್ಲ, ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು. ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈಬಿಡುವುದು ಸರಿಯಲ್ಲ. ಸಿಎಂ ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ, ಶಾಸಕನಾಗಿ ಹೀಗೆ ಮಾಡಿ ಅಂತ ಹೇಳಬಹುದಷ್ಟೇ ಎಂದರು.
ಬಳಿಕ ಮಾತನಾಡಿದ ಶಾಸಕ ನೆಹರು ಓಲೇಕಾರ್, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಅವಕಾಶ ಸಿಕ್ಕರೆ ಸಂತೋಷ. ಇಲ್ಲದಿದ್ದರೆ ಸಿಎಂ ಜೊತೆ ಕೆಲಸ ಮಾಡಿಕೊಂಡಿರುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂ ಜೊತೆ ನಿನ್ನೆ ಸಮಾಲೋಚನೆ ನಡೆಸಿದ್ದೇನೆ, ಮುಂದಿನ ದಿನದ ಅವಕಾಶದ ಭರವಸೆಯನ್ನು ನೀಡಿದ್ದಾರೆ. ಹಾಗಾಗಿ ಈ ಬಾರಿ ನಾನು ಸಚಿವ ಆಗದೇ ಇದ್ದರೂ ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದರು.