ಬೆಂಗಳೂರು: ಅನೈತಿಕ ಸಂಬಂಧ ಹೊಂದಿರುವುದಾಗಿ ಅನುಮಾನಗೊಂಡು ಕುಡಿದ ನಶೆಯಲ್ಲಿ ಪ್ರೇಯಸಿಯ ತೊಡೆ ಹಾಗೂ ಪಕ್ಕೆಲುಬಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಆರೋಪದಡಿ ಪ್ರಿಯಕರನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಪ್ರಿಯತಮೆ ಮಂಜುಳಾ ಎಂಬಾಕೆಯನ್ನು ಕೊಲೆ ಮಾಡಿದ ಆರೋಪದಡಿ ಮಳವಳ್ಳಿ ಮೂಲದ ಮಂಜುನಾಥ್ ಎಂಬಾತನನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಏನಿದು ಘಟನೆ?
ನಗರದಲ್ಲಿ ಹಲವು ವರ್ಷಗಳಿಂದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ಗೆ ಮದುವೆಯಾಗಿರಲಿಲ್ಲ. ಹಲವು ತಿಂಗಳಿಂದ ಪರಸ್ತ್ರೀಯರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಈ ವೇಳೆ ವೇಶ್ಯಾವಾಟಿಕೆ ದಂಧೆಯಲ್ಲಿ ಗುರುತಿಸಿಕೊಂಡಿದ್ದ ಮಹಿಳೆಯ ಸ್ನೇಹಿತೆಯಾಗಿದ್ದ ಮಂಜುಳಾ ಎಂಬಾಕೆಯನ್ನು ಈತ ಪರಿಚಯಿಸಿಕೊಂಡಿದ್ದ. ಈ ಪರಿಚಯ ಕ್ರಮೇಣ ಸಲುಗೆಯಾಗಿ ಮಾರ್ಪಟ್ಟಿದೆ.
ವಿವಾಹಿತೆಯಾಗಿದ್ದ ಮಂಜುಳಾಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೆ ಗಂಡ ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದ. ಆಕೆಯ ಇಬ್ಬರು ಮಕ್ಕಳು ಸಂಬಂಧಿಕರ ಮನೆಯಲ್ಲಿದ್ದರು. ಪ್ರಮುಖ ವಿಷಯ ಎಂದರೆ ಮಂಜುಳಾಳ ದುರ್ನಡತೆಯಿಂದಾಗಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕೆಯನ್ನು ದೂರ ಇಟ್ಟಿದ್ದರು ಎನ್ನಲಾಗ್ತಿದೆ. ಈ ಎಲ್ಲಾ ಕಾರಣದಿಂದ ಮಂಜುನಾಥ್ ಹಾಗೂ ಮಂಜುಳಾ ಸ್ನೇಹ ಅತ್ಯಂತ ಆಪ್ತವಾಗಿತ್ತು. ಇದಾದ ಬಳಿಕ ಇಬ್ಬರು ಬಿರೇಶ್ವರ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸಲು ಮುಂದಾಗಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ: ಸುತ್ತಾಡಿಕೊಂಡು ಬರೋಣ ಬಾ ಎಂದು ಕರೆದೊಯ್ದ ಸ್ನೇಹಿತನಿಂದ ರೇಪ್!
ಇಬ್ಬರು ಕೆಲ ದಿನಗಳ ಕಾಲ ಅನ್ಯೋನ್ಯವಾಗಿದ್ದರು. ಕುಡಿತದ ಚಟವಿದ್ದ ಮಂಜುನಾಥನು ಮಂಜುಳಾ ಮೇಲೆ ಪರಪುರುಷರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ. ಕಳೆದ ರಾತ್ರಿ ಆಕೆಯೊಂದಿಗೆ ಗಲಾಟೆ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಸುತ್ತಿಗೆಯಿಂದ ಬಲವಾಗಿ ಮಂಜುಳಾ ತೊಡೆ, ಪಕ್ಕೆಲುಬು ಭಾಗಕ್ಕೆ ಹೊಡೆದಿದ್ದಾನೆ. ಪರಿಣಾಮ ಭಾರಿ ಏಟಿನಿಂದ ಕುಸಿದುಬಿದ್ದ ಆಕೆ ಸಾವಿಗೀಡಾಗಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.