ಬೆಂಗಳೂರು : ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆ ಮಾಡಿದ್ದ ಮಹಿಳೆಗೆ ಕೊನೆಗೆ ಸ್ವಂತ ಮಗಳು ನುಡಿದ ಸತ್ಯ ಉರುಳಾಗಿದೆ. ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಿ ಆರಾಮಾಗಿದ್ದವರು ಆರು ತಿಂಗಳ ಬಳಿಕ ಮಗಳು ಬಿಚ್ಚಿಟ್ಟ ಸತ್ಯದಿಂದ ಕೊನೆಗೆ ಪ್ರಿಯಕರನ ಜೊತೆ ಪೊಲೀಸರ ಅತಿಥಿಯಾಗಿದ್ದಾಳೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಹಿಂದೆ ಆಂಜನೇಯ(35) ಎಂಬಾತನನ್ನ ಕೊಲೆಯಾಗಿತ್ತು. ಈ ಸಂಬಂಧ ಮೃತನ ಪತ್ನಿ ಅನಿತಾ ಹಾಗೂ ಆಕೆಯ ಪ್ರಿಯಕರ ರಾಕೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?: ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದ ಆಂಜನೇಯ ಹಾಗೂ ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮದ್ಯದ ದಾಸನಾಗಿದ್ದ ಆಂಜನೇಯನ ಆರೋಗ್ಯ ಹದಗೆಟ್ಟಿತ್ತು. ಅಷ್ಟೇ ಅಲ್ಲದೆ ಆಂಜನೇಯ ಮನೆ ನಿರ್ವಹಣೆಗೆ ಯಾವುದೇ ಸಹಾಯ ಮಾಡುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಅನಿತಾಳಿಗೆ ರಾಕೇಶ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.
ಉಸಿರುಗಟ್ಟಿಸಿ ಗಂಡನ ಕೊಲೆ : ಕಳೆದ ಜೂ.18ರಂದು ಆಂಜನೇಯನ ಕಥೆ ಮುಗಿಸಲು ಅನಿತಾ ಹಾಗೂ ರಾಕೇಶ್ ಸಂಚು ರೂಪಿಸಿದ್ದರು. ಅಂದು ರಾತ್ರಿ ಆಂಜನೇಯ ಮಲಗಿರುವಾಗ ಉಸಿರುಗಟ್ಟಿಸಿ ಕೊಲೆಗೈದಿದ್ದರು. ಕೊಲೆಯನ್ನು ಕಣ್ಣಾರೆ ಕಂಡಿದ್ದ ಇಬ್ಬರು ಮಕ್ಕಳಿಗೆ ಕೃತ್ಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಕುಡಿದು ಕುಡಿದು ಆಂಜನೇಯನ ಸಾವು ಸಂಭವಿಸಿದೆ ಎಂದು ಸಂಬಂಧಿಕರು ಅಕ್ಕಪಕ್ಕದವರ ಬಳಿ ಕಥೆ ಕಟ್ಟಿದ್ದ ಅನಿತಾ ಗಂಡನ ಶವಸಂಸ್ಕಾರ ಮಾಡಿ ಏನೂ ಆಗದವಳಂತೆ ಇದ್ದಳು.
ಸ್ವಂತ ಮಕ್ಕಳಿಗೆ ಕೊಲೆ ಬೆದರಿಕೆ : ಇತ್ತೀಚೆಗೆ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಅನಿತಾ ನಾಪತ್ತೆಯಾದ ಬಳಿಕ ಮಕ್ಕಳಿಬ್ಬರೂ ತಮ್ಮ ಅಜ್ಜಿಯ ಮನೆ ಸೇರಿದ್ದರು. ಅದೇ ಸಂದರ್ಭದಲ್ಲಿ ಮಕ್ಕಳು ತಮ್ಮ ತಾಯಿಯ ಕ್ರೂರತೆಯನ್ನು ಅಜ್ಜಿಯ ಮುಂದೆ ಬಿಚ್ಚಿಟ್ಟಿದ್ದರು. ಬಳಿಕ 14 ವರ್ಷದ ಹಿರಿಯ ಮಗಳ ಹೇಳಿಕೆ ಆಧರಿಸಿ ಜನವರಿ 4ರಂದು ದೂರು ಪಡೆದ ನಂದಿನಿ ಲೇಔಟ್ ಪೊಲೀಸರು ಆರೋಪಿಗಳಾದ ಅನಿತಾ ಹಾಗೂ ಆಕೆಯ ಪ್ರಿಯಕರ ರಾಕೇಶನನ್ನು ಬಂಧಿಸಿದ್ದರು. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಕೂಡಾ ನೀಡಿದ್ದಾರೆ.
ಆ್ಯಪ್ ಮೂಲಕ ಗಾಳ ಹಾಕಿ ಸುಲಿಗೆ : ಆ್ಯಪ್ ಮೂಲಕ ಗಾಳ ಹಾಕಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುನಿಲ್ ಹಾಗೂ ಲಕ್ಷ್ಮಿಪ್ರಿಯ ಎಂದು ಗುರುತಿಸಲಾಗಿದೆ. ಮೋಸ ಹೋದ 26 ವರ್ಷದ ವ್ಯಕ್ತಿಯೊಬ್ಬ ನೀಡಿದ ದೂರಿನನ್ವಯ ಇಬ್ಬರನ್ನು ಬಂಧಿಸಲಾಗಿದೆ.
ಘಟನೆ ವಿವರ : ದೂರುದಾರ ವ್ಯಕ್ತಿಯೊಬ್ಬರಿಗೆ ಆ್ಯಪ್ ಮೂಲಕ ದಿವ್ಯಾ ಎಂಬ ಹೆಸರಿನ ಹುಡುಗಿಯ ಪರಿಚಯವಾಗಿದೆ. ದಿವ್ಯಾ ಹೆಸರಿನಲ್ಲಿ ಸುನಿಲ್ ಎಂಬಾತ ದೂರುದಾರನಲ್ಲಿ ಮೆಸೇಜ್ ಮಾಡುತ್ತಿದ್ದ. ಈ ವೇಳೆ ದೂರುದಾರ ಒಂದಷ್ಟು ಫೋಟೋ, ವಿಡಿಯೋಗಳನ್ನು ಈತನಿಗೆ ರವಾನಿಸಿದ್ದ. ಬಳಿಕ ದೂರುದಾರ ಜನವರಿ 4ರಂದು ತನ್ನ ಮನೆಗೆ ಆಹ್ವಾನಿಸಿದ್ದ. ಈ ವೇಳೆ ದಿವ್ಯಾ ಎಂಬ ಹೆಸರಿನಲ್ಲಿ ಪ್ರತಿಕ್ರಿಯಿಸಿದ್ದ ಆರೋಪಿ ಸುನಿಲ್ 'ನಾನು ಇವತ್ತು ಬ್ಯುಸಿ, ನನ್ನ ಸಹೋದರಿ ಲಕ್ಷ್ಮಿಪ್ರಿಯಳನ್ನು ಮನೆಗೆ ಕಳುಹಿಸುವುದಾಗಿ ಹೇಳಿದ್ದ.
ಅದರಂತೆ ದೂರುದಾರ ವ್ಯಕ್ತಿ ಆರೋಪಿ ಲಕ್ಷ್ಮಿಪ್ರಿಯಳನ್ನು ಕೊಡುಗೆ ತಿರುಮಲಾಪುರದ ತನ್ನ ಮನೆಗೆ ಕರೆದೊಯ್ದಿದ್ದ. ಮನೆಯೊಳಗೆ ಹೋಗುತ್ತಿದ್ದಂತೆ ಆಗಮಿಸಿದ್ದ ಸುನಿಲ್, ದೂರುದಾರನಿಗೆ 'ನೀನು ಲಕ್ಷ್ಮಿಪ್ರಿಯಳನ್ನು ಜೊತೆಯಲ್ಲಿ ಕರೆ ತಂದಿರುವ ವಿಡಿಯೋ, ಫೋಟೋ ಪೊಲೀಸರಿಗೆ ಕೊಡುವುದಾಗಿ ಬೆದರಿಸಿ ಮನೆಯಲ್ಲಿದ್ದ 45 ಗ್ರಾಂ ಚಿನ್ನಾಭರಣ, ನಗದು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ಗಾಳ: ಮನೆಗೆ ಆಹ್ವಾನಿಸಿದವನಿಗೆ ವಂಚಿಸಿದ್ದ ಇಬ್ಬರ ಬಂಧನ