ಬೆಂಗಳೂರು: ಸ್ನೇಹಿತರಾದರೂ ಸರಿ ಪದೇ ಪದೇ ಕಾಲೆಳೆದು ಮಾತನಾಡುವ ಮುನ್ನ ಎಚ್ಚರ! ಸದಾ ಕಿಚಾಯಿಸುತ್ತಿರುತ್ತಾನೆ ಎಂಬ ಕಾರಣಕ್ಕೆ ಗೆಳೆಯನನ್ನೇ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಕೊತ್ತನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್ ಮಾಂಜಿ (22) ಎಂಬಾತನನ್ನು ಹತ್ಯೆಗೈದು ಪರಾರಿಯಾಗಲು ಯತ್ನಿಸುತ್ತಿದ್ದಾಗ ಜಗದೇವ್ ಹಾಗೂ ಚಂದನ್ ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನ. 16ರಂದು ಕೊತ್ತನೂರು ಠಾಣಾ ವ್ಯಾಪ್ತಿಯ ಕ್ಯಾಲಸನಹಳ್ಳಿಯ ಖಾಲಿ ಜಾಗದ ಪೊದೆಗಳ ನಡುವೆ ಶವ ಪತ್ತೆಯಾಗಿತ್ತು.
ಹತ್ಯೆಯಾದ ಲಕ್ಷ್ಮಣ್ ಮಾಂಜಿ ಹಾಗೂ ಆರೋಪಿಗಳು ಜಾರ್ಖಂಡ್ ಮೂಲದವರಾಗಿದ್ದು, ಇತ್ತೀಚೆಗೆ ಕೂಲಿ ಕೆಲಸ ಅರಸಿ ಬೆಂಗಳೂರಿಗೆ ಬಂದು ಭೈರತಿಯಲ್ಲಿ ವಾಸವಿದ್ದರು. ಮಾತಿನ ಮಧ್ಯೆ ಸ್ನೇಹಿತರ ಕಾಲೆಳೆಯುವ ಸ್ವಭಾವ ಹೊಂದಿದ್ದ ಲಕ್ಷ್ಮಣ್, ನವೆಂಬರ್ 16ರಂದು ರಾತ್ರಿ ಸಹ ಸ್ನೇಹಿತರೊಂದಿಗೆ ಪಾರ್ಟಿಗೆ ಕುಳಿತಾಗಲೂ ಸ್ನೇಹಿತರಿಬ್ಬರನ್ನೂ ಕಿಚಾಯಿಸಿದ್ದ. ಈ ವೇಳೆ ಆರೋಪಿಗಳು ಹಾಗೂ ಲಕ್ಷ್ಮಣ್ ನಡುವೆ ಜಗಳವಾಗಿತ್ತು. ನಂತರ ಮದ್ಯದ ಅಮಲಿನಲ್ಲಿದ್ದ ಲಕ್ಷ್ಮಣ್ನನ್ನು ಆರೋಪಿಗಳು ಮನೆಯ ಹೊರಗೆ ಕರೆತಂದಿದ್ದರು. ಆತನನ್ನು ಸಮೀಪದಲ್ಲಿದ್ದ ಖಾಲಿ ಜಮೀನಿಗೆ ಕರೆದೊಯ್ದು ಸಿಟ್ಟಿನಲ್ಲಿ ಹಾಲೋ ಬ್ಲಾಕ್ ಇಟ್ಟಿಗೆಯಿಂದ ಆತನ ತಲೆಗೆ ಹೊಡೆದು ಹತ್ಯೆಗೈದಿದ್ದರು. ಬಳಿಕ ಮನೆಗೆ ಬಂದು ವಾಪಾಸ್ ಜಾರ್ಖಂಡ್ಗೆ ತೆರಳಲು ಸಿದ್ಧತೆ ಆರಂಭಿಸಿದ್ದರು.
ಖಾಲಿ ಜಮೀನಿನಲ್ಲಿ ಪತ್ತೆಯಾಗಿದ್ದ ಶವದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕೊತ್ತನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶ್ವಥ್ ನಾರಾಯಣಸ್ವಾಮಿ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು, ಕೃತ್ಯದ ನಂತರ ರೈಲಿನ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದ ಜಗದೇವ್ ಹಾಗೂ ಚಂದನ್ ಕುಮಾರ್ನನ್ನು ಬಂಧಿಸಿದೆ.
ಇದನ್ನೂ ಓದಿ: ಟಿಪ್ಪರ್ ಅಡ್ಡಗಟ್ಟಿದ ರೈತರ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಪೊಲೀಸ್ ವಶಕ್ಕೆ