ಬೆಂಗಳೂರು : ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ ಕೊಲೆ ಪ್ರಕರಣವನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬೇಧಿಸಿದ್ದಾರೆ. ಬಾಡಿಗೆದಾರನೇ ಸಹಚರರೊಂದಿಗೆ ಸೇರಿ ದಂಪತಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ.
ಈ ಹಿನ್ನೆಲೆ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ನಾರಾಯಣಪ್ಪ, ರಾಮಸ್ವಾಮಿ, ಆಸೀಫ್ ಹಾಗೂ ಗಂಗಾಧರ್ ಎಂಬ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಸಾಲ ತೀರಿಸಲು ಕೊಲೆ!!
ನಾರಾಯಣಪ್ಪ ಕಳೆದ 10 ವರ್ಷಗಳ ಹಿಂದೆ ಶಾಂತರಾಜು-ಪ್ರೇಮಲತಾ ಎಂಬುವರ ಮನೆಯಲ್ಲಿ ಬಾಡಿಗೆದಾರನಾಗಿದ್ದ. ಕೆಲ ವರ್ಷಗಳ ಹಿಂದೆ ಮನೆ ಖಾಲಿ ಮಾಡಿ ಹಿಂದೂಪುರದಲ್ಲಿ ನೆಲೆಸಿದ್ದ. ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿದ್ದ.
ಸಾಲ ತೀರಿಸಲಾಗದೆ ಒದ್ದಾಡುತ್ತಿದ್ದ. ಈ ಸಂಬಂಧ ಆಗಸ್ಟ್ 12ರಂದು ದಂಪತಿ ಮನೆಗೆ ನಾರಾಯಣಪ್ಪ ಬಂದಿದ್ದ. ಸಾಲ ತೀರಿಸಲು ಹಣದ ಸಹಾಯ ಮಾಡುವಂತೆ ಮನವಿ ಮಾಡಿದ್ದ. ಈ ವೇಳೆ ದಂಪತಿ ನಿರಾಕರಿಸಿದ್ದರು.
ಇದನ್ನೂ ಓದಿ: ಮೈಸೂರು ಚಿನ್ನದಂಗಡಿಯಲ್ಲಿ ದರೋಡೆ: ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ 4 ತಂಡ ರಚನೆ
ಆಗಸ್ಟ್ 20ರಂದು ವರಮಹಾಲಕ್ಷ್ಮಿ ಹಬ್ಬದ ದಿನದಂದು ನಾಲ್ವರು ಆರೋಪಿಗಳು ಮನೆಗೆ ಬಂದಿದ್ದಾರೆ. ಸಂಬಂಧಿಕರಿಗೆ ಅನಾರೋಗ್ಯ ಹಿನ್ನೆಲೆ ಸಾಲ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರೇಮಲತಾ ನಿರಾಕರಿಸಿದ್ದರಿಂದ, ಆರೋಪಿಗಳು ಕುಪಿತಗೊಂಡು, ವೈರ್ನಿಂದ ವೃದ್ಧೆಯ ಕತ್ತು ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎನ್ನಲಾಗಿದೆ. ಮಲಗಿದ್ದ ಶಾಂತರಾಜುರನ್ನು ಸ್ಕ್ರೂಡ್ರೈವರ್ನಿಂದ ಚುಚ್ಚಿ, ತಲೆದಿಂಬಿನಿಂದ ಮುಖವನ್ನೊತ್ತಿ ಉಸಿರುಗಟ್ಟಿಸಿ ಸಾಯಿಸಿದ್ದರು ಎಂದು ತಿಳಿದು ಬಂದಿದೆ.
ಬಿಎಂಟಿಸಿ ಬಸ್ನಲ್ಲಿ ಬಂದು ದುಷ್ಕೃತ್ಯ
ದಂಪತಿ ಕೊಲೆ ಮಾಡಲು ಪೂರ್ವ ಸಿದ್ಧತೆಯೊಂದಿಗೆ ಹಿಂದೂಪುರದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಮೆಜೆಸ್ಟಿಕ್ನಿಂದ ಕುಮಾರಸ್ವಾಮಿ ಲೇಔಟ್ಗೆ ಬಿಎಂಟಿಸಿಯಲ್ಲಿ ಬಸ್ನಲ್ಲಿ ಬಂದಿದ್ದಾರೆ. ಸಮೀಪದ ಅಂಗಡಿಯೊಂದರಲ್ಲಿ ಸ್ಕ್ರೂಡ್ರೈವರ್ ಖರೀದಿಸಿದ್ದರು.
ಬಳಿಕ ಮನೆಗೆ ಹೋಗಿ ಅಂದುಕೊಂಡಂತೆ ಕೃತ್ಯವೆಸಗಿ ಮತ್ತೆ ಬಸ್ ಮೂಲಕ ಮೆಜೆಸ್ಟಿಕ್ಗೆ ಹೋಗಿ ಅಲ್ಲಿಂದ ಹಿಂದೂಪುರ ಸೇರಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನೂರಾರು ಸಿಸಿ ಟಿವಿಗಳ ದೃಶ್ಯ ಪರಿಶೀಲಿಸಿ ಆರೋಪಿಗಳ ಚಲನವಲನ ಪತ್ತೆ ಮಾಡಿ, ಬಳಿಕ ಬಂಧಿಸಿದ್ದಾರೆ.