ಬೆಂಗಳೂರು : ಪ್ರೀತಿಸಿದ ಹುಡುಗಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನೇ ಹತ್ಯೆ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರು ವಿದ್ಯಾರ್ಥಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ತಲಾ ಒಂದು ಲಕ್ಷ ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಶಶಾಂಕ್ ದಾಸ್ ಹಾಗೂ ಜಿತೇಂದ್ರನಾಥ್ ಶಿಕ್ಷೆಗೊಳಗಾದ ಆಪರಾಧಿಗಳು. ಜೈಲು ಶಿಕ್ಷೆಗೊಳಗಾಗಿರುವ ಇವರು ನೀಡುವ ದಂಡದ ಮೊತ್ತದಲ್ಲಿ 1.90 ಲಕ್ಷ ರೂಪಾಯಿಯನ್ನು ಸಂತ್ರಸ್ತ ಸೋವಿಕ್ ಚಟರ್ಜಿಗೆ ನೀಡಬೇಕು. ಇನ್ನುಳಿದ 10 ಸಾವಿರ ದಂಡದ ಮೊತ್ತವನ್ನು ಸರ್ಕಾರಕ್ಕೆ ನೀಡಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಿ. ವೆಂಕಟೇಶ್ ನಾಯಕ್ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಪಶ್ಚಿಮ ಬಂಗಾಳದಿಂದ ಬಂದಿದ್ದ ಈ ಮೂವರು ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಇತ್ತೀಚೆಗೆ ಹುಡುಗಿಯೊಬ್ಬಳನ್ನು ಪ್ರೀತಿಸುವ ವಿಚಾರವಾಗಿ ಶಶಾಂಕ್ ದಾಸ್ ಹಾಗೂ ಸೋವಿಕ್ ಚಟರ್ಜಿ ನಡುವೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ 2010ರ ಡಿಸೆಂಬರ್ 6ರಂದು ಸೋವಿಕ್ನನ್ನು ಮನೆಗೆ ಕರೆಸಿಕೊಂಡಿದ್ದ ಶಶಾಂಕ್ ಸ್ನೇಹಿತ ಜಿತೇಂದ್ರನ ಜತೆ ಸೇರಿ ಹಲ್ಲೆ ಮಾಡಿ, ಮನೆಯ ಎರಡನೇ ಮಹಡಿಯಿಂದ ತಳ್ಳಿದ್ದನು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆ ಸೇರಿದ್ದ ಸೋವಿಕ್ ಒಂದೂವರೆ ವರ್ಷಗಳ ಕಾಲ ಚಿಕಿತ್ಸೆ ಪಡೆದು ಗುಣಮುಖನಾದ ಬಳಿಕ ಘಟನೆ ಕುರಿತು ವಿವರಿಸಿದ್ದನು. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ್ದರು. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಅಭಿಯೋಜಕ ಸಂಜಯ್ ಕುಮಾರ್ ಭಟ್ ವಾದಿಸಿದ್ದರು.