ಬೆಂಗಳೂರು: ವ್ಯಕ್ತಿಯೊಬ್ಬನ ಮರಣೋತ್ತರ ಪರೀಕ್ಷಾ ವರದಿಯ ಮಾಹಿತಿ ಮೇರೆಗೆ ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಒಂದು ವರ್ಷದ ನಂತರ ಆತನದ್ದು ಸಹಜ ಸಾವಲ್ಲ, ಕೊಲೆ ಎಂಬುವುದನ್ನು ಬ್ಯಾಡರಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬ್ಯಾಡರಹಳ್ಳಿ ರಸ್ತೆಯಲ್ಲಿ ಫಿನಾಯಿಲ್ ಮಾರಾಟದ ಅಂಗಡಿ ಇಟ್ಟುಕೊಂಡಿದ್ದ 45 ವರ್ಷದ ವೆಂಕಟೇಶ್ ಎಂಬಾತ ಕೊಲೆಯಾದ ವ್ಯಕ್ತಿ. ಹರೀಶ್ ಬಂಧಿತ ಆರೋಪಿ. ಕೊಲೆಯಾದ ವೆಂಕಟೇಶ್ ಹಾಗೂ ಹರೀಶ್ ಇಬ್ಬರೂ ಸ್ನೇಹಿತರಾಗಿದ್ದರು. ಇವರ ಮತ್ತೋರ್ವ ಸ್ನೇಹಿತನ ಜೊತೆಗೂಡಿ ಕಳೆದ ವರ್ಷ ಫೆ. 14ರಂದು ಮನೆಯೊಂದರಲ್ಲಿ ಪಾರ್ಟಿ ಮಾಡಿದ್ದರು. ಅದೇ ದಿನ ವೆಂಕಟೇಶ್ ಮೃತಪಟ್ಟಿದ್ದ. ಮದ್ಯ ಸೇವನೆ ಹೆಚ್ಚಾಗಿದ್ದರಿಂದ ಮೃತಪಟ್ಟಿರಬಹುದು ಎಂದು ಆತನ ಮನೆಯವರು ಭಾವಿಸಿದ್ದರು. ಯಾಕೆಂದರೆ ಮೃತನ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ಇದಕ್ಕೆ ಪೂರಕವಾಗಿ ಆರೋಪಿ ಹರೀಶ್, ವೆಂಕಟೇಶ್ನ ಸಾವು ಸಹಜ ಎಂದು ನಂಬಿಸಿದ್ದ. ಮಾಹಿತಿ ಆಧರಿಸಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಒಂದು ಹಂತದಲ್ಲಿ ಪ್ರಕರಣವನ್ನು ಕ್ಲೋಸ್ ಮಾಡುವ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು.
ಆದರೆ, ಪೊಲೀಸರಿಗೆ ವೆಂಕಟೇಶ್ನ ಮರಣೋತ್ತರ ಪರೀಕ್ಷೆಯಲ್ಲಿ ಆಶ್ಚರ್ಯ ಕಾದಿತ್ತು. ಮರಣಕ್ಕೂ ಮುನ್ನ ವೆಂಕಟೇಶ್ ತಲೆಯ ಭಾಗದಲ್ಲಿ ಬಲವಾಗಿ ಹೊಡೆತದಿಂದ ರಕ್ತ ಹೆಪ್ಪುಗಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ತಲೆಯ ಒಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವ ಬಗ್ಗೆ ವೈದ್ಯರ ಜೊತೆ ಚರ್ಚೆ ಬಳಿಕ ಪ್ರಕರಣದ ತನಿಖೆ ಚುರುಕುಗೊಳಿಸಿದ ಇನ್ಸ್ಪೆಕ್ಟರ್ ರಾಜೀವ್, ವೆಂಕಟೇಶ್ ಪಾರ್ಟಿ ಮಾಡುವಾಗ ಜೊತೆಯಲ್ಲಿದ್ದ ಹರೀಶ್ನನ್ನು ಕರೆಯಿಸಿ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಕೊಲೆ ಮಾಡಿರುವುದಾಗಿ ಹರೀಶ್ ಬಾಯ್ಬಿಟ್ಟಿದ್ದಾನೆ.
ಓದಿ : ಹಾವೇರಿ: ಮಲಗಿದ್ದ ವೇಳೆ ಹೃದಯಾಘಾತದಿಂದ ಬಸ್ ಚಾಲಕ ಸಾವು
ಕಳೆದ ವರ್ಷ ಫೆ. 14ರಂದು ವೆಂಕಟೇಶ್, ಹರೀಶ್ ಮತ್ತು ಮತ್ತೋರ್ವನ ಜೊತೆ ಪಾರ್ಟಿ ಮಾಡಿದ್ದ. ಈ ವೇಳೆ ವೆಂಕಟೇಶ್ ಹಾಗೂ ಆರೋಪಿ ಹರೀಶ್ ನಡುವೆ ಗಲಾಟೆಯಾಗಿದೆ. ಹರೀಶ್ ಪತ್ನಿಯ ಜೊತೆ ವೆಂಕಟೇಶ್ ಮಾತನಾಡುತ್ತಿದ್ದ. ಪದೇ ಪದೆ ತನ್ನ ಪತ್ನಿಯ ಜೊತೆ ಮಾತನಾಡುವುದನ್ನು ಹರೀಶ್ ಪ್ರಶ್ನಿಸಿದ್ದ. ಈ ವೇಳೆ ಕುಡಿದ ಅಮಲಿನಲ್ಲಿ ಹೌದು, ಮಾತನಾಡಿಸುತ್ತೇನೆ. ಏನು ಮಾಡುತ್ತಿಯಾ ಎಂದು ವೆಂಕಟೇಶ್ ಪ್ರಶ್ನಿಸಿದ್ದ. ಇಷ್ಟಕ್ಕೆ ಕೋಪಗೊಂಡ ಹರೀಶ್, ಕೈಗೆ ಸಿಕ್ಕ ಬಾಟಲ್ನಿಂದ ವೆಂಕಟೇಶ್ ತಲೆಗೆ ಹೊಡೆದಿದ್ದ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೆ ವೆಂಕಟೇಶ್ ಮೃತಪಟ್ಟಿದ್ದ ಎನ್ನಲಾಗಿದೆ.
ಹತ್ಯೆ ಮಾಡಿದ ಬಳಿಕ ಕೊಲೆ ಮಾಡಿದ ಜಾಗದಲ್ಲಿ ಕುರುಹು ಸಿಗದಂತೆ ಕ್ಲೀನ್ ಮಾಡಿ ಹರೀಶ್ ಮತ್ತು ಸಹಚರ ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದರಿಂದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪೊಲೀಸರ ಚಾಣಾಕ್ಷತನದಿಂದ ವರ್ಷದ ಬಳಿಕ ಕೊಲೆ ಪ್ರಕರಣ ಭೇದಿಸಿದ್ದಾರೆ. ತನ್ನ ಹೆಂಡತಿ ಸುಂದರವಾಗಿದ್ಲು, ಅವಳನ್ನು ಪದೇ ಪದೆ ವೆಂಕಟೇಶ್ ಮಾತನಾಡಿಸುತ್ತಿದ್ದ. ಇದೇ ವಿಚಾರಕ್ಕೆ ಅನುಮಾನಗೊಂಡು ಹತ್ಯೆ ಮಾಡಿರುವುದಾಗಿ ಆರೋಪಿ ಹರೀಶ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.