ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು ಆರ್.ಆರ್.ನಗರ ಅಖಾಡದಲ್ಲಿ ಮುನಿರತ್ನ ಪರ ಭರ್ಜರಿ ಪ್ರಚಾರ ನಡೆಸಿದರು. ಕ್ಷೇತ್ರದ ಎಂಟು ವಾರ್ಡ್ಗಳಲ್ಲೂ ರೋಡ್ ಶೋ ನಡೆಸಿ ಗೆದ್ದ ತಕ್ಷಣ ಮಂತ್ರಿಯಾಗಲಿರುವ ಮುನಿರತ್ನರನ್ನು ಐವತ್ತು ಸಾವಿರ ಮತಗಳಿಂದ ಗೆಲ್ಲಿಸಿಕೊಡುವಂತೆ ಮತಯಾಚನೆ ಮಾಡಿದರು.
ಬೆಳಗ್ಗೆ ಮಲ್ಲೇಶ್ವರಂನ ಭಾವುರಾವ್ ದೇಶಪಾಂಡೆ ಭವನದಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣಾ ತಂತ್ರಗಾರಿಕೆ ನಡೆಸುವ ಮೂಲಕ ಸಿಎಂ ಆರ್.ಆರ್.ನಗರ ಚುನಾವಣಾ ರೋಡ್ ಶೋಗೆ ವೇದಿಕೆ ಸಜ್ಜುಗೊಳಿಸಿದರು. ಸಚಿವರಾದ ಆರ್.ಅಶೋಕ್, ಬೈರತಿ ಬಸವರಾಜು, ಅರವಿಂದ ಲಿಂಬಾವಳಿ, ಮುನಿರತ್ನ, ಎಸ್.ಆರ್.ವಿಶ್ವನಾಥ್ ಜತೆ ಸಭೆ ನಡೆಸಿದ ಸಿಎಂ ಕ್ಷೇತ್ರದ ಲೆಕ್ಕಾಚಾರ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು ಗೆದ್ದ ತಕ್ಷಣ ಮುನಿರತ್ನ ಮಿನಿಸ್ಟರ್ ಆಗ್ತಾರೆ ಎಂದು ಮೊದಲ ಬಾರಿಗೆ ಘೋಷಣೆ ಮಾಡಿದರು.
ವಿಸ್ತರಣೆನೋ, ಪುನಾರಚನೆಯೋ ಕಾದು ನೋಡಿ:
ಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗುತ್ತೇನೆ. ಸಂಪುಟ ವಿಸ್ತರಣೆನೋ, ಪುನಾರಚನೆಯೋ ಕಾದು ನೋಡಿ ಎಂದು ಇದೇ ವೇಳೆ ಸಿಎಂ ತಿಳಿಸಿದ್ದಾರೆ. ದೆಹಲಿಯ ವರಿಷ್ಠರು ಏನು ಹೇಳ್ತಾರೋ ಹಂಗೆ ಕೇಳ್ತೀವಿ. ಮುನಿರತ್ನ ಗೆದ್ದ ತಕ್ಷಣ 100ಕ್ಕೆ 100ರಷ್ಟು ಮಂತ್ರಿ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.
ಆರ್.ಆರ್.ನಗರ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ:
ಪ್ರಚಾರಾದ್ಯಂತ ಮುನಿರತ್ನ ಮಂತ್ರಿಯಾಗ್ತಾರೆ. ಅವರನ್ನು 40,000 ಮತಗಳ ಅಂತರದಿಂದ ಗೆಲ್ಲಿಸಿಕೊಡಿ ಎಂದು ಸಿಎಂ ಮತದಾರರ ಬಳಿ ಮತಯಾಚನೆ ಮಾಡಿದರು. ನಮ್ಮ ಜವಾಬ್ದಾರಿ ಕ್ಷೇತ್ರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡೋದು. ನಿಮ್ಮ ಹೊಣೆ ಮುನಿರತ್ನರನ್ನ ಗೆಲ್ಲಿಸೋದು. ಮುಂದಿನ ಮಂತ್ರಿಯಾಗಿ ಆಯ್ಕೆ ಆಗೋ ಮುನಿರತ್ನರಿಗೆ ಗೆಲ್ಲಿಸಿಕೊಡಿ. ಬೆಂಗಳೂರು ಅಭಿವೃದ್ಧಿಗೆ ಇನ್ನೂ 1 ಸಾವಿರ ಕೋಟಿ ಕೊಡ್ತೇವೆ. ಇಂದು ಬೆಳಗ್ಗೆ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ನಗರದಲ್ಲಿ ಮಳೆ ಬಂದ್ರೆ ಸಮಸ್ಯೆ ಆಗುತ್ತೆ. ನೀರು ಗಾಲುವೆಗಳು, ರಸ್ತೆಗಳ ಅಭಿವೃದ್ಧಿ ಮಾಡ್ತೇವೆ. ಮುನಿರತ್ನ ಸೇರಿ 17 ಶಾಸಕರು ಬರಲಿಲ್ಲ ಅಂದ್ರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಿರಲಿಲ್ಲ. ನಮ್ಮ ಕಾರ್ಯಕರ್ತರು ಮುನಿರತ್ನರಿಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ಮಂಜುನಾಥಸ್ವಾಮಿ ಮುಂದೆ ಪ್ರಮಾಣ ಮಾಡ್ತೀನಿ:
ನನ್ನ ಬಗ್ಗೆ ಕೋಟಿ ಕೋಟಿ ಹಣ ಪಡೆದಿರುವ ಅಪಪ್ರಚಾರ ಮಾಡ್ತಿದ್ದಾರೆ. ಅಪಪ್ರಚಾರ ಮಾಡೋರು ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಬರಲಿ. ನಾನೂ ಬರ್ತೀನಿ, ಪ್ರಮಾಣ ಮಾಡ್ತೀನಿ. ನಾನು ದುಡ್ಡು ತಗೊಂಡಿದ್ರೆ ಸರ್ವನಾಶ ಆಗಿಹೋಗಲಿ. ನಾನು ದುಡ್ಡುಗಾಗಿ ಬಿಜೆಪಿಗೆ ಬಂದಿದ್ರೆ ನನ್ನ ಜೊತೆ 16 ಜನ ಯಾಕೆ ಬರ್ತಿದ್ರು ಎಂದು ಮುನಿರತ್ನ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕ್ಷೇತ್ರದ ನೆಮ್ಮದಿ ಕೆಡಿಸೋದು ಬೇಡ. ಕ್ಷೇತ್ರದ ನೆಮ್ಮದಿಯ ವಾತಾವರಣ ಹೀಗೇ ಇರಲಿ. ಡಿಜೆ, ಕೆಜಿ ಹಳ್ಳಿ ಪರಿಸ್ಥಿತಿ ನಮಗೆ ಆಗೋದು ಬೇಡ. ಅಲ್ಲಿ ಗಲಭೆ ಖಂಡಿಸಲು ಒಬ್ಬ ಕಾಂಗ್ರೆಸ್ ನಾಯಕ ಸಹ ಇಲ್ಲ. ವಶಪಡಿಸಿಕೊಳ್ಳುತ್ತೇವೆ, ಛಿದ್ರ ಮಾಡ್ತೇವೆ ಅನ್ನುವ ಪದಪ್ರಯೋಗ ಆಗ್ತಿದೆ. ನಾವು ಮತ ಭಿಕ್ಷೆ ಕೇಳಲು ಬಂದಿದ್ದೇವೆ. ಮತ ಕೊಟ್ರೆ ತಗೋಬೇಕು ಕೊಡ್ಲಿಲ್ಲಾಂದ್ರೆ, ಮುಂದೆ ಹೋಗ್ಬೇಕು. ಈ ಕ್ಷೇತ್ರವನ್ನು ಮುಂದೆ ಕೆಜಿ, ಡಿಜೆ ಹಳ್ಳಿ ಆಗಲು ಬಿಡಬೇಡಿ ಎಂದು ಡಿಕೆ ಶಿವಕುಮಾರ್ಗೆ ಟಾಂಗ್ ನೀಡಿದರು.
ಜಾತಿ ಹೆಸರಲ್ಲಿ ಮತ ಕೇಳೋದು ಧರ್ಮನಾ?:
ಡಿಕೆ ಶಿವಕುಮಾರ್ ಧರ್ಮಯುದ್ಧ ಹೇಳಿಕೆಗೆ ಇದೇ ವೇಳೆ ಸಚಿವ ಆರ್.ಅಶೋಕ್, ಟಾಂಗ್ ನೀಡಿದರು. ಧರ್ಮ ಯುದ್ಧದ ಅರ್ಥ ಗೊತ್ತೆನ್ರಿ ನಿಮಗೆ? ಜಾತಿ ಹೆಸರಲ್ಲಿ ಮತ ಕೇಳೊದು ಧರ್ಮನಾ? ನಾಚಿಕೆ ಆಗಲ್ವಾ ನಿಮಗೆ? ಬಂಡೆಗಳಿಂದ ಒಂದು ರಸ್ತೆ ಸಹ ಮಾಡಕ್ಕಾಗಲಿಲ್ಲ ಇಲ್ಲಿ. ಮುನಿರತ್ನ ರಸ್ತೆ, ನೀರು ಎಲ್ಲ ಕೊಟ್ಟಿದ್ದಾರೆ. 950 ಕೋಟಿ ರೂ.ಗೆ ಕ್ಷೇತ್ರಕ್ಕೆ ಅನುದಾನ ಮುನಿರತ್ನ ತಂದಿದ್ದಾರೆ ಎಂದು ತಿಳಿಸಿದರು.