ಬೆಂಗಳೂರು: ಟಿಕೆಟ್ ವಿಚಾರವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಆರ್ ಆರ್ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ತಿಳಿಸಿದರು.
ವೈಯಾಲಿಕಾವಲ್ನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, 2018 ರಲ್ಲಿ ನಕಲಿ ಗುರುತಿನ ಚೀಟಿ ಅವ್ಯವಹಾರವಾಗಿದೆ ಎಂದು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್ನಲ್ಲಿ ನನ್ನ ಪರವಾಗಿ ತೀರ್ಪು ಬಂತು. ಬಳಿಕ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಆದರೆ, ಸುಪ್ರೀಂ ಕೋರ್ಟ್ ಆ ಅರ್ಜಿ ಸತ್ಯಕ್ಕೆ ದೂರವಾಗಿದ್ದು, ನ್ಯಾಯದ ಪರ ಕೋರ್ಟ್ ತೀರ್ಪು ನೀಡಿದೆ ಎಂದರು.
ಬಿಜೆಪಿ ಪಕ್ಷಕ್ಕೆ 14 ಜನ ಒಂದೇ ವೇದಿಕೆಯಲ್ಲಿ ಸೇರ್ಪಡೆ ಆಗಿದ್ದೇವೆ. ಟಿಕೆಟ್ ಸ್ವಲ್ಪ ವಿಳಂಬ ಆಗಿರಬಹುದು. ಆದರೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಪ್ರತಿ ಬಾರಿ ನಕಲಿ ವೋಟರ್ ಐಡಿ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರ ಆದಾಗ ನೋವನ್ನು ಅನುಭವಿಸಿದ್ದೇನೆ. ಇವತ್ತು 25,000 ಮತಗಳು ನನ್ನ ಪರ ಬಂದಿದೆ ಎಂದು ಕೋರ್ಟ್ ಹೇಳಿದೆ. ಇವತ್ತು ಸ್ಪಷ್ಟೀಕರಣ ಕೊಡುತ್ತೇನೆ, ಚುನಾವಣೆ ಆಯೋಗದಿಂದ ಹಿಡಿದು ಎಲ್ಲಾ ತನಿಖೆಯಲ್ಲೂ ಒಂದು ಮತವೂ ನಕಲಿ ಇಲ್ಲವೆಂದು ಹೇಳಿದ್ದಾರೆ. ಆ ರೀತಿ ಇವತ್ತು ತೀರ್ಪು ಬಂದಿದೆ ಎಂದು ಸ್ಪಷ್ಟಪಡಿಸಿದರು.
ತಂದೆ, ಮಗ, ಅಣ್ಣ, ತಮ್ಮಂದಿರು, ಸ್ನೇಹಿತರು ಕೆಲವು ಸಲ ಜಗಳ ಆಡ್ತಾರೆ. ಮತ್ತೆ ಒಂದಾಗ್ತಾರೆ. ಹಾಗೆ ನಾವು ಒಂದೇ ಪಕ್ಷದಲ್ಲಿ ಇದ್ದೇವೆ. ಒಟ್ಟಾಗಿ ಕೆಲಸ ಮಾಡುತ್ತೇವೆ. ಮುನಿರಾಜು ಗೌಡ ಅವರು ಆ ಸಂದರ್ಭದಲ್ಲಿ ಆ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಸಹಜ. ವೈಯಕ್ತಿಕ ದ್ವೇಷ ಏನು ಇಲ್ಲ, ಅವರಿಗೂ ಮುಂದೆ ಒಳ್ಳೆಯದಾಗಲಿ ಎಂದು ಮುನಿರತ್ನ ಹಾರೈಸಿದರು.
ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುನಿರತ್ನ, ಚುನಾವಣೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಆ ಹೆಣ್ಣು ಮಗಳ ಬಗ್ಗೆ ನಾನು ಏನು ಮಾತನಾಡುವುದಿಲ್ಲ, ಈ ಹಿಂದೆ ಸ್ಪರ್ಧೆ ಮಾಡಿದ್ದರೆ ಏನಾದರು ಹೇಳಬಹುದಿತ್ತು. ನನಗಿರುವ ಒಂದೇ ಗುರಿ, ಉಳಿದಿರುವ ಕೆಲಸ ಆಗಬೇಕು ಅಷ್ಟೇ ಎಂದರು.