ಬೆಂಗಳೂರು: ಆರ್ಆರ್ನಗರ ಉಪಚುನಾವಣೆ ಗೆಲುವಿನ ಬೆನ್ನಲ್ಲೇ ನೂತನ ಶಾಸಕ ಮುನಿರತ್ನ ಪಕ್ಷದ ನಾಯಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ಚುನಾವಣೆಯ ಗೆಲುವಿಗೆ ಸಹಕಾರ ನೀಡಿದ್ದನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿದ್ದಾರೆ.
ಬೆಳಗ್ಗೆ ವೈಯಾಲಿಕಾವಲ್ ನಿವಾಸದಲ್ಲಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕಾರ ಮಾಡಿದ ಮುನಿರತ್ನ ಅವರು ನಂತರ ಸದಾಶಿವನಗರದಲ್ಲಿರುವ ಬಿಜೆಪಿ ಹಿರಿಯ ನಾಯಕ ಎಸ್.ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದರು. ಎಸ್ಎಂಕೆ ಆಶೀರ್ವಾದ ಪಡೆದು, ಕೆಲಕಾಲ ಮಾತುಕತೆ ನಡೆಸಿದರು. ನಂತರ ಆರ್ಆರ್ನಗರ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಕಂದಾಯ ಸಚಿವ ಆರ್. ಅಶೋಕ್ ನಿವಾಸಕ್ಕೆ ಭೇಟಿ ನೀಡಿದರು. ಚುನಾವಣೆಯಲ್ಲಿ ಗೆಲ್ಲಲು ಸಹಕಾರ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿದರು.
ಬಳಿಕ ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಗೆ ಭೇಟಿ ನೀಡಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರನ್ನು ಭೇಟಿಯಾಗಿ ಅವರಿಗೂ ಸಹ ಅಭಿನಂದನೆ ಸಲ್ಲಿಸಿದರು. ಪಕ್ಷದ ಮುಖಂಡರಿಗೂ ಕೃತಜ್ಞತೆ ಸಲ್ಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್ಎ ಮುನಿರತ್ನ, ಚುನಾವಣೆ ಸಮಯದಲ್ಲಿ ಹೇಳಿಕೆ, ಪ್ರತಿ ಹೇಳಿಕೆ ಸಹಜ. ಚುನಾವಣೆ ಮುಗಿದ ಮೇಲೆ ಮತದಾರರ ಆಶೀರ್ವಾದ ಸಿಕ್ಕಮೇಲೆ ಕ್ಷೇತ್ರದ ಅಭಿವೃದ್ದಿಯೊಂದೇ ನನಗೆ ಮುಖ್ಯ ಎಂದು ತಿಳಿಸಿದರು.
ಕ್ಷೇತ್ರದ ಹಿತದೃಷ್ಟಿಯಿಂದ ಸಂಸದರಾದ ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆಯಿಂದ ಹೋಗುತ್ತೇನೆ. ಡಿ.ಕೆ.ಶಿವಕುಮಾರ್ ಒಂದು ಪಕ್ಷದ ಅಧ್ಯಕ್ಷರು. ಅವರ ಪರಿಸ್ಥಿತಿ ಬೇರೆ. ಡಿ.ಕೆ.ಸುರೇಶ್ ಹಾಗಲ್ಲ, ನಮ್ಮ ಕ್ಷೇತ್ರದ ಸಂಸದರು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವಾಗ ಯಾವುದೇ ಷರತ್ತು ಹಾಕಿರಲಿಲ್ಲ ಎಂದರು.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಸಚಿವ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ. ಅವರ ಭರವಸೆ ಮೇಲೆ ವಿಶ್ವಾಸವಿದೆ. ನಾನು ಯಾವುದೇ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ. ಅದು ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರು, ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಮಾಧ್ಯಮದವರ ಪ್ರೆಶ್ನೆಗಳಿಗೆ ಉತ್ತರಿಸಿದರು.