ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿನ ಬಿಬಿಎಂಪಿ ಅಭಿವೃದ್ಧಿ ಕಾಮಗಾರಿಗಳಿಗೆ ನಕಲಿ ಬಿಲ್ಗಳನ್ನು ಸೃಷ್ಟಿಸಿದ ಆರೋಪ ಪ್ರಕರಣದಲ್ಲಿ ಶಾಸಕ ಮುನಿರತ್ನ ಹೆಸರು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಇದನ್ನೂ ಓದಿ: ಸಿಡಿ ಪ್ರಕರಣ: ದೂರು ವಾಪಸ್ ಪಡೆದ ಬಳಿಕ ದಿನೇಶ್ ಕಲ್ಲಹಳ್ಳಿ ಮೊದಲ ಪ್ರತಿಕ್ರಿಯೆ
ಈ ಕುರಿತು ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ - 2014ರ ಡಿ.27ರಂದು ಲೋಕಾಯುಕ್ತ ಪೊಲೀಸರು ಶಾಸಕ ಮುನಿರತ್ನ ಅವರಿಗೆ ಸೇರಿದ್ದೆನ್ನಲಾದ ವೈಯಾಲಿಕಾವಲ್ನ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಆರ್.ಆರ್. ನಗರದ ಕಾಮಗಾರಿಗಳ ಟೆಂಡರ್, ನಕಲಿ ಕಾಮಗಾರಿ ಬಿಲ್, ಬಿಬಿಎಂಪಿ ಕಚೇರಿಯ ಸೀಲ್ಗಳು ಪತ್ತೆಯಾಗಿದ್ದವು.
ಈ ಸಂಬಂಧ ಎರಡು ವರ್ಷಗಳ ಕಾಲ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಆರೋಪಪಟ್ಟಿಯಲ್ಲಿ ಶಾಸಕ ಮುನಿರತ್ನ ಹಾಗೂ ಅವರ ಪತ್ನಿ ಮಂಜುಳಾ ಹೆಸರನ್ನು ಪೊಲೀಸರು ಕೈಬಿಟ್ಟಿದ್ದಾರೆ.
ಕಡತಗಳು ಸಿಕ್ಕಿರುವ ವೈಯಾಲಿಕಾವಲ್ ಮನೆಯ ಪೂರ್ಣ ವಿಳಾಸ ಉಲ್ಲೇಖಿಸಿದ್ದಾರೆ. ಆದರೆ, ಆ ಮನೆಯ ಮಾಲೀಕ ಯಾರು ಎಂಬುದನ್ನೇ ಉಲ್ಲೇಖಿಸಿಲ್ಲ. ರಾಜಕೀಯ ಪ್ರಭಾವ ಬಳಸಿ ಶಾಸಕ ಮುನಿರತ್ನ ಅವರು ತಮ್ಮ ಹೆಸರಿಲ್ಲದಂತೆ ನೋಡಿಕೊಂಡಿದ್ದಾರೆ. ಆದ್ದರಿಂದ ಆರೋಪಿಗಳ ಪಟ್ಟಿಯಲ್ಲಿ ಶಾಸಕ ಮುನಿರತ್ನ ಹಾಗೂ ಅವರ ಪತ್ನಿ ಹೆಸರನ್ನು ಸೇರಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಇದನ್ನೂ ಓದಿ: ಮಾನಹಾನಿ ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೊರೆ ಹೋಗಲ್ಲ: ಎಂಟಿಬಿ ನಾಗರಾಜ್
ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ, ಆರ್.ಆರ್. ನಗರದ ಬಿಬಿಎಂಪಿ ಕಚೇರಿಯ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್ ಆಗಿದ್ದ ಇದಯಾ ವೆಂಡನ್, ಕಾರ್ಯ ನಿರ್ವಾಹಕ ಎಂಜಿನಿಯರ್ ನಾಗರಾಜ, ಇಬ್ಬರು ಗುಮಾಸ್ತರು ಹಾಗೂ ಗುತ್ತಿಗೆದಾರರು ಸೇರಿದಂತೆ ಒಂಬತ್ತು ಜನರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.