ಬೆಂಗಳೂರು: ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಮುನಿರತ್ನ ಸಿಎಂ ಯಡಿಯೂರಪ್ಪ ದುಂಬಾಲು ಬಿದ್ದಿದ್ದು, ಮುಖ್ಯಮಂತ್ರಿಗಳು ಹೋದಲ್ಲಿ ಬಂದಲ್ಲೆಲ್ಲ ಎದುರಾಗಿ ಟಿಕೆಟ್ ಬೇಡಿಕೆ ಇಡುತ್ತಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಮುನಿರತ್ನ ಆರ್.ಆರ್. ನಗರ ಕ್ಷೇತ್ರದ ಟಿಕೆಟ್ ಬಗ್ಗೆ ಪ್ರಸ್ತಾಪಿಸಿದರು. ನಂತರ ಸಿಎಂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲು ಶಾಂತಿನಗರದ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿದರು. ಈ ಸಂದರ್ಭದಲ್ಲೂ ಸಿಎಂ ಹಿಂಬಾಲಿಸಿದ ಮುನಿರತ್ನ ಶಾಂತಿನಗರಕ್ಕೂ ಭೇಟಿ ನೀಡಿದರು. ಪರಿಷತ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ಸಿಎಂ ನಿರ್ಗಮಿಸುವ ವೇಳೆ ಕಾರಿನ ಸಮೀಪ ಬಂದು ಆಗಲೂ ನಮಸ್ಕರಿಸುತ್ತ ಟಿಕೆಟ್ಗಾಗಿ ಪರಿ ಪರಿಯಾಗಿ ಮನವಿ ಮಾಡಿದರು.
ಸಿಎಂ ನಿರ್ಗಮದ ನಂತರ ಅಲ್ಲಿಯೇ ಕೆಲಕಾಲ ನಿಂತ ಮುನಿರತ್ನ ಪಕ್ಷದ ಕೆಲ ಮುಖಂಡರ ಜೊತೆ ಮಾತುಕತೆ ನಡೆಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಕೈಬೀಸುತ್ತಾ ನಿರ್ಗಮಿಸಿದರು. ಕಳೆದ ಎರಡು ದಿನದಿಂದಲೂ ಬೆಳಗ್ಗೆಯೇ ಸಿಎಂ ನಿವಾಸಕ್ಕೆ ಬರುತ್ತಿರುವ ಮುನಿರತ್ನ ಟಿಕೆಟ್ ಬಗೆಗಿನ ಆತಂಕವನ್ನು ಯಡಿಯೂರಪ್ಪ ಮುಂದೆ ವ್ಯಕ್ತಪಡಿಸುತ್ತಿದ್ದಾರೆ. ಟಿಕೆಟ್ ಸಿಗುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವಂತೆ ಮನವಿ ಮಾಡುತ್ತಿದ್ದಾರೆ.