ಬೆಂಗಳೂರು: ಕನಕದಾಸರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾಲಾರ್ಪಣೆ ಮಾಡಿಸಬೇಕು. ರಘುನಾಥರಾವ್ ಮಲ್ಕಾಪುರೆ ಅವರನ್ನು ಸಭಾಪತಿಯಾಗಿ ಮುಂದುವರೆಸಬೇಕು. ಈಶ್ವರಪ್ಪ ಅವರನ್ನು ಮರಳಿ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕರನ್ನು ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ. ಮುಕುಡಪ್ಪ ಒತ್ತಾಯಿಸಿದ್ದಾರೆ.
ಮಲ್ಕಾಪುರೆ ಅವರನ್ನು ಸಭಾಪತಿಯಾಗಿ ಮುಂದುವರೆಸಿ: ನಗರದ ಖಾಸಗಿ ಹೋಟೆಲ್ನಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಅಂದು ಮೋದಿ ಅವರಿಂದ ಶಾಸಕರ ಭವನದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಬೇಕು.
ಸದ್ಯ ರಘುನಾಥರಾವ್ ಮಲ್ಕಾಪುರೆ ಸಭಾಪತಿಯಾಗಿದ್ದಾರೆ. ಅವರ ಅವಧಿ ಮುಗಿಯುವವರೆಗೂ ಅವರನ್ನೇ ಮುಂದುವರೆಸಬೇಕು. ನಮ್ಮ ಸಮುದಾಯದ ಯಾರೂ ಸ್ಪೀಕರ್, ಸಭಾಪತಿ ಆಗಿರಲಿಲ್ಲ. ಹಾಗಾಗಿ ಮಲ್ಕಾಪುರೆ ಅವರನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಈಶ್ವರಪ್ಪರನ್ನು ಸಂಪುಟಕ್ಕೆ ಮರಳಿ ತೆಗೆದುಕೊಳ್ಳಿ: ಕೆ ಎಸ್ ಈಶ್ವರಪ್ಪ ಆರಂಭದಿಂದ ಬಿಜೆಪಿಯಲಿದ್ದು, ಪಕ್ಷ ಸಂಘಟನೆ ಮಾಡಿದ್ದಾರೆ. ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಈಗ ಆರೋಪ ಮುಕ್ತರಾಗಿದ್ದಾರೆ. ಹಾಗಾಗಿ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು. ಇದರಿಂದ ಪಕ್ಷ ಬಲಗೊಳ್ಳಲಿದೆ. 190 ಕ್ಷೇತ್ರಗಳಲ್ಲಿ ನಮ್ಮ ಸಮುದಾಯ ದೊಡ್ಡ ಪ್ರಮಾಣದಲ್ಲಿದೆ. ನಮ್ಮ ಸಮಾಜ ಬಿಜೆಪಿ ಪರ ನಿಲ್ಲಬೇಕಾದರೆ ಬಿಜೆಪಿ ನಮ್ಮ ಪರವಿದೆ ಎನ್ನುವ ಸಂದೇಶ ಸಿಗಬೇಕು. ಈಶ್ವರಪ್ಪಗೆ ಅವಕಾಶ ಕಲ್ಪಿಸುವ ಮೂಲಕ ಈ ಸಂದೇಶ ನೀಡಬೇಕು ಎಂದರು.
ನಾವು ಬೇಡಿಕೆ ಸಲ್ಲಿಸಲು ಬಂದಿದ್ದೇವೆ. ಪ್ರತಿಭಟಿಸಲು ಅಲ್ಲ, ಕನಕದಾಸ ಜಯಂತಿ ಮಾಡಿದ್ದು ಬಿಜೆಪಿ ಸರ್ಕಾರ. ನಮ್ಮ ಸಮಾಜಕ್ಕೆ ಬಿಜೆಪಿ ಸರ್ಕಾರ ಮೊದಲಿನಿಂದಲೂ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದೆ. ಈಶ್ವರಪ್ಪ ಮೂರು ಬಾರಿ ಬಿಜೆಪಿ ಅಧ್ಯಕ್ಷರಾಗಿದ್ದರು. ಬಿಜೆಪಿ ಗೆಲ್ಲಲು ಅನುಕೂಲವಾಗಲಿ ಎಂದು ಒತ್ತಾಯ ಮಾಡುತ್ತಿದ್ದೇವೆ ಎಂದು ಮುಕುಡಪ್ಪ ಹೇಳಿದರು.
ಇದನ್ನೂ ಓದಿ: ಪ್ರಧಾನಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರುವಂತೆ ಸೂಚಿಸಿದ್ದ ಸುತ್ತೋಲೆ ವಾಪಸ್
ಕುರುಬರ ಸಮಾಜ ದೊಡ್ಡದಿದ್ದು, ಮೂರೂವರೆ ಕೋಟಿ ಕುರುಬರು ದಕ್ಷಿಣ ಭಾರತದಲ್ಲಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಇಲ್ಲಿ ಕುರುಬ ಸಮುದಾಯಕ್ಕೆ ಅವಕಾಶ ನೀಡಿದರೆ, ಅದರ ಪ್ರಭಾವ ಬೀರಿ ಬೇರೆ ರಾಜ್ಯದಲ್ಲಿಯೂ ಅನುಕೂಲವಾಗಲಿದೆ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವೆ. ಸದ್ಯ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ವರದಿ ಬರಲಿ, ನಂತರ ನಮ್ಮ ಬೇಡಿಕೆಯನ್ನು ಮತ್ತೆ ಸರ್ಕಾರದ ಮುಂದೆ ಇರಿಸಲಿದ್ದೇವೆ ಎಂದು ಹೇಳಿದರು.