ಬೆಂಗಳೂರು: ಇಂದು ಸಿಸಿಬಿ ಕಚೇರಿಗೆ ಶಾಸಕ ಜಮೀರ್ ಅಹಮ್ಮದ್ ಆಪ್ತ ಮುಜಾಹಿದ್ ಪಾಷ ದಿಢೀರ್ ಭೇಟಿ ನೀಡಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಒಂದೆಡೆ ಜಮೀರ್ ಅಹಮ್ಮದ್ಗೆ ಸಂಬಂಧಿಸಿದ ದಾಖಲೆ ನನ್ನ ಬಳಿ ಇದೆ ಎಂದಿರುವ ಸಂಬರಗಿ ವಿಚಾರಣೆ ನಡೆಯುತ್ತಿದ್ರೆ, ಮತ್ತೊಂದೆಡೆ ಜಮೀರ್ ಆಪ್ತ ಪಾಷಾಗೆ ಸಿಸಿಬಿ ನೋಟಿಸ್ ನೀಡದಿದ್ರೂ ಸಹ ಕಚೇರಿಗೆ ಆಗಮಿಸಿದ್ದಾರೆ. ನಾನು ನಾಲ್ಕು ದಿನಗಳು ಬೆಂಗಳೂರಿನಲ್ಲಿ ಇರುವುದಿಲ್ಲ, ಅಜ್ಮೀರ್ಗೆ ಹೋಗುತ್ತಿದ್ದೇನೆಂದು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಬಂದಿರುವುದಾಗಿ ಮುಜಾಹಿದ್ ಪಾಷ ತಿಳಿಸಿದ್ದಾನೆ.
ಸದ್ಯ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ಹೆಸರು ಕೂಡ ತಳುಕು ಹಾಕಿಕೊಂಡಿದ್ದು, ಒಂದು ವೇಳೆ ಸಿಸಿಬಿ ಅಧಿಕಾರಿಗಳು ನನಗೂ ನೋಟಿಸ್ ನೀಡುತ್ತಾರಾ ಎಂಬ ಭಯದಲ್ಲಿ ಜಮೀರ್ ಆಪ್ತ ಮುಜಾಹಿದ್ ಪಾಷ ಇದ್ದಾರಾ ಎಂಬ ಅನುಮಾನಗಳು ಈಗ ಕಾಡ್ತಿವೆ.
ಇನ್ನು ಐಎಂಎ ಪ್ರಕರಣದಲ್ಲೂ ಮುಜಾಹಿದ್ ಪಾಷ ಹೆಸರು ಕೇಳಿ ಬಂದಿತ್ತು. ಅಲ್ಲದೆ ಶಾಸಕ ಜಮೀರ್ ಅಹಮ್ಮದ್ ಮೇಲಿನ ಡ್ರಗ್ಸ್ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ವೈಯಕ್ತಿಕ ಕೆಲಸಕ್ಕೆ ನಾನು ಬಂದಿದ್ದೇನೆ ಎಂದು ಮುಜಾಹಿದ್ ಹೇಳಿದ್ದು, ಈ ಹೇಳಿಕೆ ಈಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.