ಬೆಂಗಳೂರು: ಎಂಟಿಬಿ ನಾಗರಾಜ್ ಮುಂಬೈಗೆ ಹಾರುತ್ತಿದ್ದಂತೆ ದೋಸ್ತಿ ನಾಯಕರು ವಿಚಲಿತರಾಗಿದ್ದಾರೆ. ಇತ್ತ ವಿಶ್ವಾಸ ಮತಯಾಚನೆಗೆ ಮುಂದಾಗಿರುವ ಸಿಎಂಗೆ ಟೆನ್ಷನ್ ಹೆಚ್ಚಿದ್ದು, ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ದೌಡಾಯಿಸಿದ್ದಾರೆ.
ನಿನ್ನೆ ದಿನಪೂರ್ತಿ ಸಂಧಾನ ಮಾಡುವ ಮೂಲಕ ಆಶಾಕಿರಣ ಮೂಡಿಸಿದ್ದ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಇಂದು ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ಹಾರಿರುವುದು ದೋಸ್ತಿ ಪಕ್ಷಗಳನ್ನು ಕಂಗೆಡಿಸಿದೆ. ಡಾ. ಸುಧಾಕರ್ ಒಪ್ಪಿದರೆ ನಾನು ರಾಜೀನಾಮೆ ವಾಪಸ್ ಪಡೆಯತ್ತೇನೆ ಎಂದಿದ್ದ ನಾಗರಾಜ್ ಇಂದು ಏಕಾಏಕಿ ಮುಂಬೈಗೆ ತೆರಳಿದ್ದಾರೆ.
ಈ ಮೂಲಕ ವಿಶ್ವಾಸ ಮತಯಾಚಿಸಲು ನಿರ್ಧರಿಸಿರುವ ಸಿಎಂಗೆ ದೊಡ್ಡ ಹಿನ್ನೆಡೆಯಾಗಿದೆ. ಹಠಾತ್ ರಾಜಕೀಯ ಬೆಳವಣಿಗೆಯಿಂದ ಶಾಕ್ಗೆ ಒಳಗಾಗಿರುವ ಸಿಎಂ ನೇರವಾಗಿ ದೊಡ್ಡಗೌಡರ ನಿವಾಸಕ್ಕೆ ತೆರಳಿ ಚರ್ಚೆ ನಡೆಸುತ್ತಿದ್ದಾರೆ. ಅತೃಪ್ತರ ಮನವೊಲಿಕೆ ಬಹುತೇಕ ಅಸಾಧ್ಯವಾಗುತ್ತಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಾಸ ಮತಯಾಚನೆ ಕಷ್ಟಸಾಧ್ಯವಾಗಿದ್ದು, ಸರ್ಕಾರ ಉಳಿವಿನ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ತಾಜ್ ಹೋಟೆಲ್ನಲ್ಲಿ ಸಿದ್ದರಾಮಯ್ಯ ಸಭೆ:
ಎಂಟಿಬಿ ನಾಗರಾಜ್ ಮುಂಬೈಗೆ ಹೋಗುತ್ತಿದ್ದಂತೆ ಕೈ ಪಾಳಯದಲ್ಲಿ ಕಸಿವಿಸಿ ಆರಂಭವಾಗಿದೆ. ಈ ಹಿನ್ನೆಲೆ ತಾಜ್ ವಿವಾಂತ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಮೂವತ್ತು ಶಾಸಕರ ಜೊತೆ ಸಿಎಲ್ಪಿ ನಾಯಕ ಸಿದ್ಧರಾಮಯ್ಯ ಸಭೆ ನಡೆಸುತ್ತಿದ್ದಾರೆ.
ಪ್ರಸ್ತುತ ರಾಜಕೀಯ ಬೆಳವಣಿಗೆ, ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಶಾಸಕರು ಕೈತಪ್ಪಿ ಹೋಗುತ್ತಿರುವ ಹಿನ್ನೆಲೆ ಇಲ್ಲಿರುವ ಶಾಸಕರಿಗೆ ಇರುವ ಆತಂಕ, ಅನುಮಾನ ದೂರ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಶಾಸಕರಲ್ಲಿ ವಿಶ್ವಾಸ ಮೂಡಿಸುವ ಜೊತೆಗೆ ನಾಳೆಯ ಅಧಿವೇಶನದ ಸಿದ್ಧತೆ ಮತ್ತು ಬಿಜೆಪಿ ನಾಯಕರ ತಂತ್ರಗಾರಿಕೆ ಏನಿರಬಹುದು ಎಂಬುದರ ಬಗ್ಗೆ ಸಹ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗ್ತಿದೆ.