ಬೆಂಗಳೂರು : ಎಂಎಲ್‌ಸಿ ಆಗಿ ಐದು ತಿಂಗಳಾಗಿದೆ. ನಾವು ಇನ್ನೂ ಮಂತ್ರಿ ಆಗಿಲ್ಲ. ನಮ್ಮ ಹಣೆಬರಹ ಕೆಟ್ಟಿರಬೇಕು ಎಂದು ಎಂಟಿಬಿ ನಾಗರಾಜ್ ಹೇಳಿದರು.
ಸಚಿವ ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಭೇಟಿಯಲ್ಲಿ ವಿಶೇಷ ಏನಿಲ್ಲ. ನಿನ್ನೆ ಖಾಸಗಿ ಹೋಟೆಲ್ನಲ್ಲಿ ಎಲ್ಲರೂ ಕಷ್ಟಸುಖ ಹಂಚಿಕೊಳ್ಳುವುದಕ್ಕೆ ಸೇರಿಕೊಂಡಿದ್ವಿ ಎಂದರು.
ಮುಂಬೈ ಬಳಿಕ ನಾವು ಒಟ್ಟಿಗೆ ಸೇರಿರಲಿಲ್ಲ. ನಾವು 17 ಮಂದಿ ಒಟ್ಟಾಗಿ ಇದ್ದೇವೆ. ರಮೇಶ್ ಜಾರಕಿಹೊಳಿ ಮೇಲೆ ನಮಗೆ ಅಸಮಾಧಾನ ಏನೂ ಇಲ್ಲ. ನಮ್ಮ ಪರವೂ ರಮೇಶ್ ಜಾರಕಿಹೊಳಿ ಹೈಕಮಾಂಡ್ ಬಳಿ ಮಂತ್ರಿ ಸ್ಥಾನ ಕೇಳಿದ್ದಾರೆ. ನಾವು ಇನ್ನೂ ಮಂತ್ರಿ ಆಗಿಲ್ಲ. ಅದೇ ನಮ್ಮ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಸ್ಥಾನ ಕೊಡುತ್ತೇನೆ, ಸಚಿವರನ್ನಾಗಿ ಮಾಡುತ್ತೇನೆ ಎಂದು ಸಿಎಂ ಹೇಳುತ್ತಲೇ ಇದ್ದಾರೆ. ಆದರೆ, ಈವರೆಗೂ ಮಂತ್ರಿ ಮಾಡಿಲ್ಲ. ಇದು ನಮಗೆ ಬೇಸರ ಆಗಿದೆ. ಇದರಿಂದ ಯಾರಿಗಾದರೂ ಬೇಸರ ಆಗಲ್ವಾ ಎಂದು ಪ್ರಶ್ನಿಸಿದರು.
ಮಂತ್ರಿ ಆಗುವವರೆಗೂ ಕಾಯಲೇಬೇಕು. ನಾನು ವಿಧಾನಪರಿಷತ್ ಸದಸ್ಯನಾಗಿ 5 ತಿಂಗಳಾಗಿದೆ. ಮಂತ್ರಿ ಯಾವಾಗ ಎಂದು ನೀವೇ ಕೇಳಬೇಕು. ಮಂತ್ರಿಯಾದವರ ಹಣೆ ಬರಹ ಚೆನ್ನಾಗಿತ್ತು. ನಮ್ಮ ಹಣೆಬರಹ ಕೆಟ್ಟಿತ್ತು ಎಂದರು.