ಹೊಸಕೋಟೆ (ಬೆಂಗಳೂರು): ದೇವರು ನನಗೆ ಆಸ್ತಿ, ಅಂತಸ್ತು, ಹಣ ಎಲ್ಲವನ್ನೂ ಕೊಟ್ಟಿದ್ದಾನೆ. ಆದರೆ ನಾನು ಜನಸೇವೆ ಮಾಡಲು ರಾಜಕೀಯ ಪ್ರವೇಶ ಮಾಡಿದ್ದೇನೆ ವಿನಃ, ಹಣ ಮಾಡುವ ಉದ್ದೇಶದಿಂದಲ್ಲವೆಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ಅನುಗೊಂಡಹಳ್ಳಿ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಸ್ವಾಭಿಮಾನ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಗ್ರಾಪಂ ಸದಸ್ಯ ಮುರಳಿ ಹಾಗೂ ಅವರ ಬೆಂಬಲಿಗರನ್ನು ಅಭಿನಂದಿಸಿ ಮಾತನಾಡಿದ ಎಂಟಿಬಿ ನಾಗರಾಜ್, ಮೂರು ಬಾರಿ ಶಾಸಕನಾಗಿ, ಒಂದು ಬಾರಿ ಸಚಿವನಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡದ ಕಾರಣ, ಅಧಿಕಾರಕ್ಕೆ ಅಂಟಿಕೊಂಡು ಕೂರದೆ, ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಗೊಂಡೆ. ಆದರೆ ಕೆಲವರು ಹಣದ ಆಸೆಗಾಗಿ ಬಿಜೆಪಿ ಸೇರಿರುವುದಾಗಿ ಸುಳ್ಳು ಪ್ರಚಾರ ಮಾಡಿದ್ದಾರೆ. ದೇವರು ನನಗೆ ದಾನ ಮಾಡುವಷ್ಟು ಸಂಪತ್ತನ್ನು ಕರುಣಿಸಿದ್ದಾನೆ. ರಾಜಕಾರಣದಲ್ಲಿ ಹಣ ಮಾಡುವ ಆಸೆ ನನಗಿಲ್ಲ ಎಂದರು.
ತಾಲೂಕಿನಲ್ಲಿ ನನ್ನ ಅಭಿವೃದ್ಧಿಯನ್ನು ಮೆಚ್ಚಿ, ಸ್ವಾಭಿಮಾನಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅನುಗೊಂಡಹಳ್ಳಿ ಹೋಬಳಿಯ 27 ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಉದ್ಘಾಟನೆ ಮಾಡಿಸುತ್ತೇನೆ ಎಂದರು.