ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನಂದಗುಡಿ ಹೋಬಳಿಯಲ್ಲಿ ಬೆಳಗ್ಗೆಯಿಂದ ಪ್ರಚಾರದಲ್ಲಿ ತೊಡಗಿದ್ದರು. ಡಿ.ಶೆಟ್ಟಿಹಳ್ಳಿ, ಸತ್ಯವಾರ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ ಅವರು, ಬೈಲ್ ನರಸಾಪುರದಲ್ಲಿ ಪ್ರಚಾರ ನಡೆಸುತ್ತಾ ಎಂಟಿಬಿ ನಾಗರಾಜ್ ಅವರು ರಿಯಲ್ ಎಸ್ಟೇಟ್ ಮಾಡಿ ಹಣವನ್ನು ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅದೇ ಮಾದರಿಯಲ್ಲಿ ಚುನಾವಣೆಯಲ್ಲಿ ಎಲ್ಲರಿಗೂ ಒಂದೊಂದು ಬೆಲೆ ಕಟ್ಟುತ್ತಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಿಗೆ 2 ಲಕ್ಷ, ತಾಲೂಕು ಪಂಚಾಯಿತಿ ಸದಸ್ಯರಿಗೆ 5 ಲಕ್ಷ, ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ 75 ಲಕ್ಷ ಬೆಲೆ ಕಟ್ಟಿದ್ದಾರೆ. ಅದೇ ರೀತಿ ನನಗೂ ಬೆಲೆ ಕಟ್ಟಿದ್ರೂ. 120 ಕೋಟಿ ಕೊಡುತ್ತಾರಂತೆ. ಎಂಟಿಬಿ ನಾಗರಾಜ್ ಅವರೇ ನೀವು 120 ಕೋಟಿ ಅಲ್ಲ, ನಿಮ್ಮ ಇಡೀ ಆಸ್ತಿ ಕೊಟ್ರೂ ನಾನು ನಿಮ್ಮ ಆಮಿಷಕ್ಕೆ ಒಳಗಾಗಲ್ಲ. ನಾನು ಮಾರಾಟಕ್ಕಿಲ್ಲ. ಸ್ವಾಭಿಮಾನನಾ ಖರೀದಿ ಮಾಡಲು ಸಾಧ್ಯಾನಾ?. ಸ್ವಾಭಿಮಾನಕ್ಕಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಜನರಿಗಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಎಂಟಿಬಿ ವಿರುದ್ದ ಹರಿಹಾಯ್ದರು.
ಇನ್ನು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡರಿಗೆ ಬುದ್ದಿ ಭ್ರಮಣೆಯಾಗಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಶರತ್, ಬುದ್ದಿ ಭ್ರಮಣೆ ಯಾರಿಗೆ ಆಗಿದೆ ಅಂತ ಜನ ತೀರ್ಮಾನ ಮಾಡ್ತಾರೆ, ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿರುವವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದರು.