ಹೊಸಕೋಟೆ: ರಾಜಕೀಯ ಜಂಜಾಟಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದ ಎಂ.ಟಿ.ಬಿ ನಾಗರಾಜ್ ಇದೀಗ ಕ್ಷೇತ್ರದ ಕಡೆ ಮುಖಮಾಡಿದ್ದಾರೆ.
ಕ್ಷೇತ್ರದಲ್ಲಿ ಕೆಲವು ಹಿತೈಷಿಗಳ ಜೊತೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ನಾನು ಏನೇ ಮಾಡಿದರು ತಾಲೂಕು ಮತ್ತು ನಮ್ಮ ಕಾರ್ಯಕರ್ತರ ಒಳಿತಿಗಾಗಿ. ನನಗೆ ಅಧಿಕಾರ ಬೇಕಾಗಿಲ್ಲ, ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ನನಗೆ ದೇವರು ಎಲ್ಲಾ ರೀತಿಯ ಸಂಪತ್ತುಗಳನ್ನು ನೀಡಿದ್ದಾನೆ, ಯಾವ ಪಕ್ಷದವರಿಗೂ ನಾನು ಮಾರಾಟವಾಗಿಲ್ಲ. ನನ್ನ ಕ್ಷೇತ್ರ ಅಭಿವೃದ್ಧಿಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೆನೆ. ನನಗೆ ನಿಮ್ಮ ಬೆಂಬಲ ಬೇಕು ಎಂದು ಕಾರ್ಯಕರ್ತರ ಬಳಿ ಎಂಟಿಬಿ ಮನವಿ ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಐದು ತಿಂಗಳು ಸಚಿವನಾಗಿದ್ದೆ. ಆದರೆ ನಮಗೆ ಯಾವುದೇ ರೀತಿಯಲ್ಲಿ ಹಣ ಬಿಡುಗಡೆ ಮಾಡಲಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಹೇಳದೆ ಕೇಳದೆ ವರ್ಗಾವಣೆ ಮಾಲಾಯ್ತು. ಇದರಿಂದ ಬೇಸತ್ತು ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದಿದ್ದು ಎಂದು ತಮ್ಮ ಆಪ್ತ ಮುಖಂಡರ ಬಳಿ ಮಾಜಿ ಶಾಸಕ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮಾಜಿ ಡಿಸಿಎಂ ಡಾ. ಪರಮೇಶ್ವರ್ ಅವರಿಗೂ ವಿಷಯ ಮುಟ್ಟಿಸಿದ್ದೆ. ಅವರು ಸಹ ಕೈಚೆಲ್ಲಿ ಕುಳಿತರು. ನಮ್ಮ ಕೆಲಸಗಳೇ ಆಗುತ್ತಿಲ್ಲ ಅಂದ್ರೆ ನಾವು ಹೇಗೆ ನಿಮ್ಮ ಕೆಲಸ ಮಾಡುವುದು ಎಂದು ನನ್ನೆದುರೇ ಅಸಹಾಯಕತೆ ತೋರಿಸಿದ್ರು. ಶಾಸಕನಾಗಿದ್ದಾಗ ತಾಲೂಕನ್ನು ಅಭಿವೃದ್ಧಿ ಮಾಡಿದೆ. ಸಚಿವನಾದ ಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗದ ಕಾರಣ ನಾನು ರಾಜೀನಾಮೆ ನೀಡಿದೆ ಎಂದು ಎಂಟಿಬಿ ತಿಳಿಸಿದ್ದಾರೆ.
ಆಪ್ತ ಸಮಾಲೋಚನೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಮುಖಂಡರ ಜೊತೆಗೆ ಮಾತನಾಡಿದ್ದೇನೆ. ನನ್ನ ಹಾಗೂ ಕ್ಷೇತ್ರ ಸಮಸ್ಯೆಗಳನ್ನು ಹೇಳಿದ್ದೀನಿ. ಮುಂದಿನ ದಿನಗಳಲ್ಲಿ ನಮ್ಮ ಬೆಂಬಲಿಗರು ಹೇಳುವ ಪ್ರಕಾರ ನಾನು ತೀರ್ಮಾನ ತೆಗೆದುಕೊಳ್ಳುತೇನೆ ಎಂದರು.
ಇನ್ನು ಅನರ್ಹಗೊಂಡ ಎಲ್ಲಾ ಶಾಸಕರು ಕಾನೂನು ಹೋರಾಟದ ಜೊತೆಗೆ, ನಮ್ಮ ನಿರ್ಧಾರಗಳನ್ನು ಕೆಲವೇ ದಿನಗಳಲ್ಲಿ ತಿಳಿಸುತ್ತೇವೆ ಎರಡು-ಮೂರು ದಿನ ಕಾಯಿರಿ ಎಂದು ಇದೇ ವೇಳೆ ಮಾಜಿ ಶಾಸಕ ತಿಳಿಸಿದರು.