ಹೊಸಕೋಟೆ: ತಾಲೂಕಿನ ಅನಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಮಾಡುವ ವಿಚಾರದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಚಿವ ಎಂಟಿಬಿ ನಾಗರಾಜ್ ನಡುವೆ ಜಟಾಪಟಿ ನಡೆದಿದೆ.
ಉದ್ಘಾಟನೆಗೆ ಟೇಪ್ ಕಟ್ ಮಾಡಲು ತಂದಿದ್ದ ಕತ್ತರಿಯನ್ನ ಶಾಸಕ ಶರತ್ ಎತ್ತಿಕೊಂಡು ಕಟ್ ಮಾಡಲು ಮುಂದಾದಾಗ ಎಂಟಿಬಿ ನಾಗರಾಜ್ ಅವರು ಶಾಸಕ ಶರತ್ ಬಚ್ಚೇಗೌಡರ ಮೇಲೆ ಗರಂ ಆದರು. ಟೇಪ್ ಕಟ್ ಮಾಡಲು ನಾ ಮುಂದು, ತಾ ಮುಂದು ಅಂತಾ ಇಬ್ಬರ ನಡುವೆ ಕಿತ್ತಾಟ ಶುರುವಾಗಿ ಗಲಾಟೆ ಕೈ ಕೈ ಮಿಲಾಸುವ ಹಂತಕ್ಕೆ ತಲುಪಿತ್ತು.
ಸಚಿವ ಎಂಟಿಬಿ ಗರಂ ಆದರೂ ತಲೆಕೆಡಿಸಿಕೊಳ್ಳದೇ ಶಾಸಕ ಶರತ್ ಟೇಪ್ ಕಟ್ ಮಾಡಿದರು. ಟೇಪ್ ಕಟ್ ಮಾಡಿ ಒಳಗೆ ಹೋಗುತ್ತಿದ್ದಂತೆ ನಿಮ್ಮ ಅಪ್ಪ ಬಚ್ಚೇಗೌಡ, ನಿಂದು ಇದೇ ಆಗೋಯ್ತು ಅಂತಾ ಶರತ್ ಬಗ್ಗೆ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದರು.
ಬಚ್ಚೇಗೌಡರ ಬಗ್ಗೆ ಮಾತನಾಡುತ್ತಿದ್ದಂತೆ ಶಾಸಕ ಶರತ್ ಬಚ್ಚೇಗೌಡ, ಎಂಟಿಬಿ ನಡುವೆ ಟಾಕ್ ವಾರ್ ಶುರುವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಬೆಂಬಲಿಗರು ಮತ್ತು ಪೊಲೀಸರು ಮಧ್ಯ ಪ್ರವೇಶಿಸಿ ಶಾಸಕರ ಹಾಗೂ ಸಚಿವರನ್ನ ಸಮಾಧಾನ ಮಾಡಿ ಕರೆದುಕೊಂಡು ಹೋದರು.