ಬೆಂಗಳೂರು: ಯಾರಿಗೂ ಉಪಯೋಗ ಆಗದ ವಿಚಾರಕ್ಕೆ ಕಾಂಗ್ರೆಸ್ ಧರಣಿ ನಡೆಸುತ್ತಿದೆ. ಕಾಂಗ್ರೆಸ್ ಜವಾಬ್ದಾರಿ ಇಲ್ಲದ ಪ್ರತಿಪಕ್ಷ. ಜನರ ಹಣದಲ್ಲಿ ನಡೆಯುವ ಕಲಾಪದ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಗುಡುಗಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ನಮ್ಮ ಪಕ್ಷದ ನಾಯಕರು ಮಾತಾಡಿದ್ದಾರೆ. ಸ್ವತಃ ಈಶ್ವರಪ್ಪನವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ನಾನು ಮಾತಾಡುವುದು ಏನು ಇಲ್ಲ ಎಂದರು.
ಕಾಂಗ್ರೆಸ್ ಪಾದಯಾತ್ರೆಯಿಂದ ಕಾವೇರಿ ನೀರು ಬರಲ್ಲ. ಪಾದಯಾತ್ರೆಯಿಂದ ನೀರು ಬರುತ್ತೆ ಅನ್ನೋ ಹಾಗಿದ್ರೆ ಎಲ್ಲರೂ ಪಾದಯಾತ್ರೆ ಮಾಡುತ್ತಿದ್ದರು. ಬಿಜೆಪಿ ಪ್ರಯತ್ನದಿಂದ ಕಾವೇರಿ ಫೇಸ್ 4,5 ಬಂದಿದೆ. ಮಾಜಿ ಪ್ರಧಾನಿ ದಿ. ವಾಜಪೇಯಿಯವರ ಪ್ರಯತ್ನಗಳಿಂದ ಬೆಂಗಳೂರಿಗೆ ನೀರು ಬಂದಿದೆ. ರಾಜಧಾನಿಗೆ ನೀರು ಒದಗಿಸುವ ವಿಚಾರದಲ್ಲಿ ಕಾಂಗ್ರೆಸ್ ಸಲಹೆ ಬೇಕಿಲ್ಲ. ಮೊದಲು ಬೆಂಗಳೂರಿಗೆ ಕುಡಿಯುವ ನೀರು ಸಂಬಂಧ ಕಾಂಗ್ರೆಸ್ ಏನು ಮಾಡಿದೆ ಅಂತ ಹೇಳಲಿ ಎಂದು ಕಾಂಗ್ರೆಸ್ ಪಾದಯಾತ್ರೆಗೆ ತಿರುಗೇಟು ನೀಡಿದರು.
ಹಿಜಾಬ್, ಕೇಸರಿ ಶಾಲು ವಿವಾದ ಕುರಿತು ಮಾತನಾಡಿ, ಹಿಜಾಬ್-ಕೇಸರಿ ಶಾಲು ವಿಚಾರ ಕೋರ್ಟಿನಲ್ಲಿದೆ. ಅದರ ಬಗ್ಗೆ ಈ ಹಂತದಲ್ಲಿ ನಾನು ಮಾತಾಡೋದು ಸರಿಯಲ್ಲ. ಕೋರ್ಟ್ ತೀರ್ಪು ಬಳಿಕ ಅದರ ಬಗ್ಗೆ ಮಾತಾಡ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ರು.
ದೇಶದ ಆರ್ಥಿಕತೆ ಬಲ ಪಡಿಸಲು ಬಜೆಟ್ನಲ್ಲಿ ಪ್ರಾಶಸ್ತ್ಯ ಕೊಡಲಾಗಿದೆ. ದೂರಗಾಮಿ ದೃಷ್ಠಿಯುಳ್ಳ ಬಜೆಟ್ ಇದಾಗಿದೆ. ಮತ್ತಷ್ಟು ಉದ್ಯೋಗಾವಕಾಶಕ್ಕೆ ಆದ್ಯತೆ ಸಿಗಲಿದೆ. ಪಿಎಲ್ಐ ಯೋಜನೆಗಳಿಂದ ಮುಂದಿನ ದಿನಗಳಲ್ಲಿ 60ಲಕ್ಷ ಉದ್ಯೋಗಗಳ ಸೃಜನೆಯ ಭರವಸೆ ಲಭಿಸಿದೆ. ಹೊಸ ತಂತ್ರಜ್ಞಾನಗಳಿಗೆ ಬಜೆಟ್ನಲ್ಲಿ ಪ್ರೋತ್ಸಾಹ ಸಿಗಲಿದೆ ಎಂದರು.
ಎಂಪಿಗಳಿಂದ ಏನು ಪ್ರಯೋಜನ ಆಗಿದೆ. ಬೆಂಗಳೂರಿಗೆ ಎಂಪಿಗಳು ಏನ್ ತಂದಿದ್ದಾರೆ. ಅಂತ ವಿಪಕ್ಷದವರು ಪ್ರಶ್ನಿಸುತ್ತಿದ್ದಾರೆ. ಪ್ರಧಾನಮಂತ್ರಿ ಜನೌಷಧ ಕೇಂದ್ರ ತೆರೆಯಲಾಗಿದೆ. ಬೆಂಗಳೂರಿನಲ್ಲಿ ಹೊಸದಾಗಿ ಕಳೆದೊಂದು ವರ್ಷದಲ್ಲಿ 40 ಜನೌಷಧ ಕೇಂದ್ರಗಳು ತಲೆಯೆತ್ತಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 75 ಜನೌಷಧ ಕೇಂದ್ರಗಳಿವೆ. ಇದರಿಂದ ಲಕ್ಷಾಂತರ ಜನ ಕಡಿಮೆ ದರದಲ್ಲಿ ಔಷಧ ಪಡೆಯಬಹುದು ಎಂದು ತಿಳಿಸಿದರು.
ಇಪಿಎಫ್ಒದಲ್ಲಿ 13 ಲಕ್ಷ ಹೊಸ ಉದ್ಯೋಗಾಂಕ್ಷಿಗಳ ನೋಂದಣಿಯಾಗಿದೆ. ಉದ್ಯೋಗ ಸೃಷ್ಟಿಯಾಗ್ತಿಲ್ಲ ಎಂದು ಪ್ರತಿಪಕ್ಷದವರು ಒಣ ಆರೋಪ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ವರ್ಷ 1.68 ಲಕ್ಷ ಉದ್ಯೋಗಾಂಕ್ಷಿಗಳ ನೋಂದಣಿಯಾಗಿದೆ. ಸ್ಟಾರ್ಟಪ್ಗಳಿಗೆ ಕೇಂದ್ರದಿಂದ ಪ್ರೋತ್ಸಾಹ ಸಿಕ್ಕಿದೆ. ಬೆಂಗಳೂರಿನಲ್ಲೂ ಸ್ಟಾರ್ಟಪ್ಗಳಿಗೆ ಉತ್ತೇಜನ ಸಿಗಲಿದೆ ಎಂದು ಸಂಸದರು ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಬೆಂಗಳೂರು ದಕ್ಷಿಣ ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸೋಮವಾರ ಸಂಜೆಯವರೆಗೂ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ 'ಕೈ' ಶಾಸಕರಿಗೆ ವಿಪ್ ಜಾರಿ