ಬೆಂಗಳೂರು : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎಲ್ಲರೂ ಹೇಳುತ್ತಿದ್ದು, ಒತ್ತಡ ಮೀರಿ ನಿಲ್ಲುವಲ್ಲಿ ಯಶಸ್ವಿಯಾಗುತ್ತೇನೆ ಎಂದು ಸದ್ಯಕ್ಕೆ ಹೇಳುವುದಕ್ಕೆ ಆಗುವುದಿಲ್ಲ ಎಂದು ಸಂಸದ ಸದಾನಂದ ಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜಕಾರಣ ಎಂದರೆ ಅಸಮಾಧಾನ, ಭಿನ್ನಾಭಿಪ್ರಾಯ ಇರಲಿದೆ. ನಾನು ಎಲ್ಲ ಹುದ್ದೆ ನೋಡಿದ್ದೇನೆ. ಹೀಗಾಗಿ ನಾನು ರಾಜಕಾರಣದಿಂದ ದೂರ ಇರುವ ಬಗ್ಗೆ ನಿರ್ಧಾರ ಮಾಡಿದ್ದೆ. ಆದರೆ ಪಕ್ಷದ ಎಲ್ಲ ನಾಯಕರು ಬಂದು ನೀವೇ ಸ್ಪರ್ಧಿಸಿ ಅಂತ ಒತ್ತಡ ಹಾಕುತ್ತಿದ್ದಾರೆ. ಕಾಂಗ್ರೆಸ್‌ನ ಮುಖಂಡರು ಸಹಾ ನಾನು ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ಯಾರನ್ನು ದೂರ ಇಟ್ಟವನಲ್ಲ, ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಸಣ್ಣ ಕೆಲಸ ಮಾಡಿ ದೊಡ್ಡ ಪ್ರಚಾರ ಪಡೆಯುವ ವ್ಯಕ್ತಿ ನಾನಲ್ಲ. ಈ ಹಂತದಲ್ಲಿ ನಾನು ಏನು ಹೇಳೊಲ್ಲ, ಮುಂದೆ ಕಾದು ನೋಡೋಣ. ಆದರೆ ಪಕ್ಷದ ಹಿತದೃಷ್ಟಿ, ಕಾರ್ಯಕರ್ತರ ಒತ್ತಡ ಬಂದಾಗ ಮುಂದೆ ಏನಾಗುತ್ತೆ ನೋಡೋಣ ಎಂದರು.
ಮಾಜಿ ಸಚಿವ ವಿ. ಸೋಮಣ್ಣ ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಸೋಮಣ್ಣನವರೇ ನಾನು ಸ್ಪರ್ಧಿಸುವಂತೆ ಹೇಳಿದ್ದಾರೆ. ಯಾರೆಲ್ಲ ವಿರೋಧಿಸುತ್ತಿದ್ದರೂ ಅವರೇ ನಾನು ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಬೇಸರಗೊಂಡವರನ್ನು ಮಾತಾಡಿ ಸರಿ ಮಾಡುತ್ತೇವೆ. ಹೊಸ ತಂಡ ಆ ಕೆಲಸ ಮಾಡಲಿದೆ. ಮನೆ ಎಂದ ಮೇಲೆ ಇದೆಲ್ಲಾ ಇದ್ದಿದ್ದೇ. ಸಣ್ಣ ಗೊಂದಲ ಬೇಸರ ಇರುತ್ತದೆ ಎಂದು ಸದಾನಂದ ಗೌಡರು ತಿಳಿಸಿದರು.
ಹೊಸ ತಂಡದ ಮೇಲೆಯೇ ಸೋಮಣ್ಣ ಕೋಪ ವಿಚಾರವಾಗಿ ಮಾತನಾಡುತ್ತ, ಯಾವುದೋ ಒಂದು ಸ್ಥಾನದಲ್ಲಿ ಸೋಮಣ್ಣ ಸ್ಪರ್ಧೆ ಮಾಡಿ ಸೋತಿದ್ದಾರೆ. ಗೋವಿಂದ ರಾಜನಗರದಲ್ಲಿ ನಿಂತಿದ್ದರೆ ನೂರಕ್ಕೆ ನೂರು ಗೆಲುವು ಸಾಧಿಸುತ್ತಿದ್ದರು. ಹಾಗಾಗಿ ಬೇಸರ ಆಗುವುದು ಸಹಜ ಎಂದರು.
ಇಂದು ವಿಧಾನಸೌಧದಲ್ಲಿ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಅವರಿಗೆ ಶುಭ ಕೋರಿದ್ದೇನೆ. ಸರ್ಕಾರ ಆಡಳಿತಕ್ಕೆ ಬಂದು ಆರೇಳು ತಿಂಗಳು ಆಗಿದೆ. ಆಡಳಿತ ಸಂಪೂರ್ಣ ಹದಗೆಡಿಸಿದ್ದಾರೆ. ಇದನ್ನ ಸದನದೊಳಗೆ ಪರಿಣಾಮಕಾರಿಯಾಗಿ ಪ್ರಸ್ತಾಪಿಸಬೇಕು. ಆ ಕೆಲಸವನ್ನು ಕೋಟ ಶ್ರೀನಿವಾಸ ಪೂಜಾರಿಯವರು ಮಾಡುತ್ತಾರೆ ಎಂದರು.
ನಾವೂ ರಾಮನ ಭಕ್ತರು ಎಂಬ ಡಾ. ಜಿ. ಪರಮೇಶ್ವರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸದಾನಂದ ಗೌಡ ಅವರು, ಪರಮೇಶ್ವರ್ ರಾಮ ಎಲ್ಲರ ದೇವ ಎಂದು ನಂಬಿದ್ದರಲ್ಲ. ಇತರರಿಗೂ ಆ ಬುದ್ಧಿ ಬರಲಿ. ಮುಸ್ಲಿಂ ಮಹಿಳೆಯೊಬ್ಬರು ರಾಮನ ನೋಡಲು ಯಾತ್ರೆ ಹೊರಟಿರುವುದನ್ನು ನೋಡಿದರೇ ಎಲ್ಲರೂ ರಾಮನನ್ನು ಒಪ್ಪುತ್ತಿದ್ದಾರೆ. ಪರಮೇಶ್ವರ್ ಅವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲಿ ಎಂದು ಹೇಳಿದರು.
ಇದನ್ನೂ ಓದಿ : ಬರ ಅಧ್ಯಯನಕ್ಕೆ ಬಂದಿದ್ದೇನೆ, ಬೂಟಾಟಿಕೆ ಮಾಡಲು ಬಂದಿಲ್ಲ: ಬಿ ವೈ ವಿಜಯೇಂದ್ರ