ಬೆಂಗಳೂರು: ನಾನು ಕಾಂಗ್ರೆಸ್ ಮುಖಂಡರಿಗೆ ಮಾಧ್ಯಮದ ಮೂಲಕ ಬಹಿರಂಗ ಸವಾಲು ಹಾಕುತ್ತೇನೆ. ನೈತಿಕತೆ ಬಗ್ಗೆ ಮಾತನಾಡಲು ನಿಮಗೆ ಹಕ್ಕಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಂತ್ರಸ್ತೆಯೇ ದೂರು ನೀಡಿದ್ರು. ಆದರೆ ಮೇಟಿಗೆ ಕ್ಲೀನ್ ಚಿಟ್ ನೀಡಿದ್ರು. ಈಗ ಆ ಯುವತಿ ದೂರು ಕೊಟ್ಟಿಲ್ಲ. ಅಧಿವೇಶನದಲ್ಲಿ ಬಜೆಟ್, ಕೋವಿಡ್, ನೀರಿನ ಬಗ್ಗೆ ಚರ್ಚೆ ಮಾಡಬಹುದು. ಆದರೆ ಕಲಾಪವನ್ನು ಕಾಂಗ್ರೆಸ್ನವರು ಬಲಿ ತೆಗೆದುಕೊಂಡರು ಎಂದು ಟೀಕಿಸಿದರು.
ವೇಣುಗೋಪಾಲ್ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಆಗಿದ್ದರು. ಸರಿತಾ ನಾಯರ್ ಪ್ರಕರಣ ಏನಾಯ್ತು ನಿಮಗೆ ಗೊತ್ತಿದೆಯಾ? ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ನಾವು ಮಹಿಳೆಯನ್ನು ಗೌರವಿಸುತ್ತೇವೆ. ಇವತ್ತಿಗೂ ಭಾರತ ಮಾತೆಗೆ ಜಯಕಾರ ಹಾಕುತ್ತೇವೆ. ತಪ್ಪಿಸಿಕೊಂಡು ಅವರೆಲ್ಲಾ ಓಡಾಡುತ್ತಿದ್ದಾರೆ. ಮುಂದೆ ಬಂದು ಯುವತಿ ದೂರು ಕೊಡಲಿ ಎಂದು ಒತ್ತಾಯಿಸಿದ ಅವರು, ಕಾಂಗ್ರೆಸ್ನವರು ಷಡ್ಯಂತ್ರ ಮಾಡ್ತಿದ್ದಾರೆ ಎಂದು ದೂರಿದರು.
ಬಸನಗೌಡ ಪಾಟೀಲ್ ಯತ್ನಾಳ್ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಲ್ಲ. ಅವರು ಬಿಜೆಪಿ ಶಾಸಕರಾಗಿ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಅವರ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದರು.
ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಯಾವುದೋ ಒಂದು ಆವೇಶದಲ್ಲಿ ಸಚಿವ ಸುಧಾಕರ್ ಈ ಮಾತನ್ನು ಹೇಳಿರಬಹುದು. ಆ ಒಂದು ಹೇಳಿಕೆಯನ್ನು ಅವರು ವಾಪಸ್ ಪಡೆಯಬೇಕು. ಅದು ಅವರ ವೈಯಕ್ತಿಕ ಹೇಳಿಕೆಯಾದ್ರೂ ಆ ರೀತಿಯ ಹೇಳಿಕೆ ಸರಿಯಲ್ಲ. ಅವರು ನಮ್ಮದೇ ಪಕ್ಷದವರು ಆಗಿರಬಹುದು. ಆದರೆ ತಪ್ಪು ಮಾಡಿದಾಗ ನಾವೆಲ್ಲ ತಿದ್ದುಕೊಳ್ಳಬಹುದು. ಸುಧಾಕರ್ ಅವರು ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.