ಬೆಂಗಳೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಪೇಟೆ ರೌಡಿ ರೀತಿಯಲ್ಲಿ ಮಾತನಾಡಿದ್ದಾರೆ. ಅದಕ್ಕೆ ನಾನು ಉತ್ತರ ನೀಡುವುದಿಲ್ಲ. ನನ್ನ ಪ್ರತಿಕ್ರಿಯೆಗೂ ಅವರು ಅರ್ಹರಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಪಕ್ಕದ ಕ್ಷೇತ್ರದ ಸಂಸದರು. ಅವರು ಎರಡು ಬಾರಿ ಸಂಸದರಾಗಿದ್ದಾರೆ. ಅವರು ಅರಿತು ಮಾತನಾಡಬೇಕಾಗುತ್ತದೆ. ಪೇಟೆ ರೌಡಿಯ ತರಹ ಮಾತನಾಡಬಾರದು. ಮೈಸೂರು ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂದು ನನಗೂ ಗೊತ್ತಿದೆ. ಕೊಡಗು ಭಾಗಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವ ಬಗ್ಗೆ ನಮಗೂ ದೂರು ಬಂದಿದೆ.
ಅಂಬರೀಶ್ ಇದ್ದಾಗ ಯಾರಿಗೂ ಧೈರ್ಯ ಇರಲಿಲ್ಲ. ಆಗ ಇಂತಹ ಮಾತುಗಳನ್ನು ಯಾರು ಆಡುತ್ತಿರಲಿಲ್ಲ. ಇಂದು ಅಂಬರೀಶ್ ಇಲ್ಲ. ಹಾಗಾಗಿ, ಅವರೆಲ್ಲಾ ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ್ ವಿರುದ್ಧ ಹರಿಹಾಯ್ದರು. ನಮ್ಮ ಕ್ಷೇತ್ರದ ಬಗ್ಗೆ ಅವರು ಮಾತನಾಡುವುದು ಸರಿಯಲ್ಲ. ಒಬ್ಬ ಸಂಸದರು, ಇನ್ನೊಬ್ಬ ಸಂಸದರ ಬಗ್ಗೆ ಮಾತನಾಡಲು ಹಕ್ಕಿಲ್ಲ.
ಸಂಸದರು ಸಂಸದರ ಭಾಷೆ ಬಳಸಿ ಮಾತನಾಡಿದರೆ ಸರಿ, ಅವರು ಪೇಟೆ ರೌಡಿ ರೀತಿಯಲ್ಲಿ ಮಾತಾಡಿದ್ದು, ನಾನು ಉತ್ತರ ನೀಡುವುದಿಲ್ಲ. ಇದಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಜಿಲ್ಲೆಯ ಜನ ಉತ್ತರ ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನಾನು ಮಂಡ್ಯದ ಸಂಸದೆ, ನನ್ನ ಕ್ಷೇತ್ರಕ್ಕೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ಬರಲಿದೆ. ಜನಪ್ರತಿನಿಧಿಗಳು ಜನರ ಬಳಿ ಹೋದಾಗ ಸಮಸ್ಯೆಗಳನ್ನು ಹೇಳಿಕೊಂಡು ಬರುವುದು ಸಹಜ. ಆದರೆ, ಅದಕ್ಕೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ, ನಾನು ಅವರ ಹೇಳಿಕೆಗೆ ಉತ್ತರ ನೀಡಲ್ಲ. ಅದಕ್ಕೆ ಅವರು ಅರ್ಹರೂ ಅಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.