ಮೈಸೂರು: ಸಿಎಂ ಸಿದ್ದರಾಮಯ್ಯರನ್ನು ನಾನು ನಿಂದಿಸಿಲ್ಲ. ಆಡು ಭಾಷೆಯ ಪದ ಬಳಸಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಫ್ಐಆರ್ ದಾಖಲಿಸಿದ್ದರಿಂದ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್‌ನಲ್ಲಿ ಈ ಕುರಿತು ಮಾತನಾಡಿದ್ದಾರೆ.
ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆಯವರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಂಪಿ ಸ್ಥಾನ ಸೋತರೆ ಅವರ ಮುಖ್ಯಮಂತ್ರಿ ಸ್ಥಾನ ಅಲುಗಾಡುತ್ತದೆ. ಹೀಗಾಗಿ ವ್ಯವಸ್ಥಿತವಾಗಿ ನನ್ನ ಮೇಲೆ ಪಿತೂರಿ ನಡೆಯುತ್ತಿದೆ ಎಂದರು.
ನಾನು ಎಲ್ಲರಂತೆ ಸೋಮಾರಿ ಸಿದ್ದನ ರೀತಿ ಕೂತಿಲ್ಲ. ಜಾತಿ ರಾಜಕಾರಣ ಮಾಡದೆ ಅಭಿವೃದ್ಧಿ ರಾಜಕಾರಣ ಮಾಡಿದ್ದೀನಿ ಅಂತಾ ಹೇಳಿದ್ದೇನೆ. ಈ ಬಗ್ಗೆ ಕಾಂಗ್ರೆಸ್ನವರಿಗೆ ರಾತ್ರಿ ಜ್ಞಾನೋದಯ ಆಗಿದೆ. ನಂತರ ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದಾರೆ. ನಾನು ಸೋಮಾರಿ ಸಿದ್ಧ ಅನ್ನೋ ಪದವನ್ನು ಸಿದ್ದರಾಮಯ್ಯರಿಗೆ ಬಳಸಿದ್ದೀನಿ ಅಂತಾ ತಿರುಚಲಾಗಿದೆ. ಸೋಮಾರಿ ಸಿದ್ಧ ಅನ್ನೋದು ನಾಮಪದವಲ್ಲ. ವ್ಯಕ್ತಿ ನಿರ್ದಿಷ್ಟ ಪದವೂ ಅಲ್ಲ. ಇದು ಆಡು ಭಾಷೆಯ ಪದ. ಸೋಮಾರಿ ಸಿದ್ಧ ಅನ್ನೋ ಪದ ಒಂದು ಪರಿಸ್ಥಿತಿ, ಒಂದು ಗುಣವನ್ನು ಸೂಚಿಸುವ ಪದ ಎಂದು ವಿವರಿಸಿದರು.
ನಾನು ಸಿದ್ದರಾಮಯ್ಯನವರಿಗೆ ಎಲ್ಲೇ ಸಿಕ್ಕರೂ ಕಾಲಿಗೆ ನಮಸ್ಕಾರ ಮಾಡುತ್ತೇನೆ. ಆದರೆ, ಸಿದ್ದರಾಮಯ್ಯನವರು ತಮ್ಮ ಜೀವನದಲ್ಲಿ ಯಾರನ್ನಾದರೂ ಬಹುವಚನದಲ್ಲಿ ಮಾತಾಡಿಸಿರುವ ಉದಾಹರಣೆ ಇದೆಯೇ?, ಮೋದಿಯವರನ್ನೂ ಮಿಸ್ಟರ್ ಮೋದಿ ಅಂತಾ ಹೇಳುತ್ತೀರಿ. ಅವರು ಮಿಸ್ಟರ್ ಮೋದಿ ಅಲ್ಲ, ಈ ದೇಶದ ಪ್ರಧಾನಮಂತ್ರಿಗಳು, ಅವರನ್ನು ಗೌರವದಿಂದ ಕರೆಯಬೇಕು ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಕರ್ನಾಟಕ ಕಾಂಗ್ರೆಸ್ ಫೇಸ್ಬುಕ್ ಪೇಜ್‌ನಲ್ಲಿ ಅಣ್ಣ ನಾಡಕಳ್ಳ, ತಮ್ಮ ಮರಗಳ್ಳ ಅಂತ ಬರೆದುಕೊಂಡಿದ್ದೀರಿ. ಈ ರೀತಿ ಬರೆದು ನನ್ನ ಬಳಿ ನೀವು ಯಾವ ರೀತಿ ಗೌರವ ಕೊಡಿ ಅಂತಾ ಕೇಳುತ್ತೀರಿ? ಎಫ್ಐಆರ್ನಲ್ಲಿ ನನ್ನ ತಮ್ಮನ ಹೆಸರಿಲ್ಲ. ನೀವು ಕಲ್ಲು ಬಿಸಾಡಿದ್ರೆ, ನಾನು ಹಣ್ಣು ಕೊಡೋಕೆ ಮಾವಿನ ಮರವಲ್ಲ. ನಾನೂ ಕೂಡ ಕಲ್ಲನ್ನೇ ಬಿಸಾಡುತ್ತೇನೆ. ಇನ್ನೂ ತೀವ್ರವಾಗಿಯೇ ಬಿಸಾಡುತ್ತೇನೆ ಎಂದು ಗರಂ ಆದರು.
ನಾನು ಸಿದ್ದರಾಮಯ್ಯರಿಗೆ ಸೋಮಾರಿ ಸಿದ್ಧ ಎಂಬ ಪದ ಬಳಸಿಲ್ಲ. ಸಿದ್ದರಾಮಯ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾತನಾಡಿಲ್ಲ. ನನ್ನ ಅಭಿವೃದ್ಧಿ ಕೆಲಸಗಳು ಬಹಳಷ್ಟು ಜನರ ಕಣ್ಣು ಕುಕ್ಕುತ್ತಿವೆ. ಹೀಗಾಗಿ ಈ ರೀತಿ ತಿರುಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ನಿಮ್ಮ ಬಾಲಬುಡುಕರು ಬಹಳಷ್ಟು ಜನ ಹುಟ್ಟಿಕೊಂಡಿದ್ದಾರೆ. ಅದರಲ್ಲಿ ಸ್ವಲ್ಪ ಜನ ಲೋಕಸಭಾ ಚುನಾವಣಾ ಆಕಾಂಕ್ಷಿಗಳಿದ್ದಾರೆ. ಮೊದಲು ನೀವು ಅಭ್ಯರ್ಥಿಯ ಹೆಸರು ಘೋಷಣೆ ಮಾಡಿ. ಆವಾಗ ಅವರೇ ಕಿತ್ತಾಡಿಕೊಳ್ತಾರೆ. ಹಾಗಾಗಿ ನನ್ನ ಹೆಸರು ಬಳಸಿ ರಾಜಕೀಯ ಮಾಡುತ್ತಿದ್ದಾರೆ. ಜೊತೆಗೆ ನಿಗಮ ಮಂಡಳಿ ಘೋಷಣೆ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಿ. ಆಗ ಅವರೇ ಸುಮ್ಮನಾಗುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಸದ ಪ್ರತಾಪ ಸಿಂಹ ವಿರುದ್ಧ ಪ್ರಕರಣ ದಾಖಲು