ಬೆಂಗಳೂರು: ಕೋವಿಡ್ ಹಿನ್ನೆಲೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾವು ಸೋಮವಾರದಿಂದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಕಣಕ್ಕಿಳಿಯುವುದಾಗಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಿಗದಿಯಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ಸರ್ವಸಮ್ಮತ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ಕಣಕ್ಕಿಳಿದಿದ್ದು, ನಾಳೆಯಿಂದ ಇವರ ಪರ ಪ್ರಚಾರ ಕಾರ್ಯಕ್ಕೆ ಸುರೇಶ್ ಇಳಿಯಲಿದ್ದಾರೆ. ಕ್ಷೇತ್ರದ ಕಾರ್ಯಕರ್ತರು ಹಾಗೂ ಮತದಾರರನ್ನು ಉದ್ದೇಶಿಸಿ ಇಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ನವೆಂಬರ್ 3ಕ್ಕೆ ಮತದಾನ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಪಕ್ಷದ ಎಲ್ಲಾ ನಾಯಕರು ಈಗಾಗಲೇ ಬಂದು ನಿಮ್ಮನ್ನು ಭೇಟಿಯಾಗಿದ್ದಾರೆ. ಕೊರೊನಾ ಹಿನ್ನೆಲೆ ಕಳೆದ 15 ದಿನಗಳಿಂದ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಗ್ಗೆಯಿಂದಲೇ ನಾನು ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತನಾಗಿ ನಿಮ್ಮೊಂದಿಗೆ ಭಾಗಿಯಾಗುತ್ತೇನೆ ಎಂದಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ವಸಮ್ಮತಿಯಿಂದ ಕುಸುಮಾ ಹನುಮಂತರಾಯಪ್ಪ ಅವರನ್ನ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ಕೂಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೇಕಿದೆ. ಬದಲಾವಣೆಗೆ ನಿಮಗೊಂದು ಅವಕಾಶ ಸಿಕ್ಕಿದೆ. ಯುವ ನಾಯಕತ್ವಕ್ಕೆ ಬೆಂಬಲಿಸಿ ಮಹಿಳೆಯರ ಪರವಾಗಿ ದನಿಯಾಗುವ ಕಾರ್ಯಕ್ಕೆ ನಾವು-ನೀವೆಲ್ಲಾ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದು ತಿಳಿಸಿದ್ದಾರೆ.