ಬೆಂಗಳೂರು: ಸಿಡಿ ಲೇಡಿ ವಿಚಾರವಾಗಿ ಮಾತನಾಡಿರುವ ಸಂಸದ ಡಿಕೆ ಸುರೇಶ್,ವಿಧಾನಸೌಧದಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಂತ್ರಸ್ತೆ ಪರ ಧ್ವನಿ ಎತ್ತಿದೆ. ಸೌಜನ್ಯಕ್ಕೂ ಬಿಜೆಪಿ ಯುವತಿ ಪರ ನಿಂತಿಲ್ಲ ಎಂದಿದ್ದು, ಈ ವಿಷಯದಲ್ಲಿ ಇಬ್ಬಗೆ ನೀತಿ ಅನುಸರಣೆ ಮಾಡುತ್ತಿದೆ ಎಂದಿದ್ದಾರೆ.
ಅತ್ತಿಬೆಲೆ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂಸದ, 20 ದಿನಗಳಿಂದ ಸಂತ್ರಸ್ತೆಯ ಸಹಾನುಭೂತಿಗೆ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ಸಂತ್ರಸ್ತೆ ಪರ ಕಾಂಗ್ರೆಸ್ ಧ್ವನಿ ಎತ್ತಿರುವ ಕಾರಣಕ್ಕಾಗಿ ನಮ್ಮ ಹೆಸರು ಉಲ್ಲೇಖಿಸಿರಬಹುದು. ಹಾಗಂತ ಈ ಪ್ರಕರಣಕ್ಕೆ ಕಾಂಗ್ರೆಸ್ ಹೊಣೆಯಾಗುತ್ತಾ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: 'ದೊಡ್ಡ ಬಾಂಬ್ ಸ್ಫೋಟ ಮಾಡುತ್ತೇನೆ'... ಆಡಿಯೋ ವೈರಲ್ ಬೆನ್ನಲ್ಲೇ ಜಾರಕಿಹೊಳಿ ಹೇಳಿಕೆ
ನಿಯಮಗಳಂತೆ ಸರ್ಕಾರ ಪ್ರಕರಣವನ್ನ ಎಸ್ಐಟಿಗೆ ನೀಡಿಲ್ಲ. ಹೀಗಾಗಿ ತನಿಖೆ ಪ್ರಾಥಮಿಕವಾಗಿಯೇ ದಿಕ್ಕು ತಪ್ಪಿದೆ ಎಂದರು. ಯಾರೋ ಮಾಡಿರುವ ಕೃತ್ಯಕ್ಕೆ ಪತ್ರಕರ್ತರಿಂದ ತೀವ್ರ ಮಾಹಿತಿ ಕಲೆ ಹಾಕುತ್ತಿರುವುದು,ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಎಳೆದಂತಿದೆ. ಹೀಗಾಗಿ ರಾಜಕೀಯ ವೈರತ್ವಕ್ಕೆ ಡಿ.ಕೆ ಶಿವಕುಮಾರ್ ಮೇಲೆ ಆರೋಪಿಸಲಾಗ್ತಿದೆ ಎಂದರು.
ಪ್ರಕರಣ ದಾಖಲಾಗಿದ್ದರೆ ಎಸ್ಐಟಿ ನಿಷ್ಪಕ್ಷವಾದ ತನಿಖೆ ಮಾಡಲಿ,ಯಾರೇ ಆಕೆಗೆ ಶೋಷಿಸಿದ್ದರೆ ಶಿಕ್ಷೆಯಾಗಲಿ. ಯುವತಿಯೊಂದಿಗೆ ಸಂಬಂದಪಟ್ಟವರ್ಯಾರು, ಏನೇನು ಸಂಬಂಧವಿದೆ ಎನ್ನುವುದು ಬಯಲಾಗಲಿ.ಗೊತ್ತುಗುರಿಯಲ್ಲದೆ ಎಸ್ಐಟಿ ನೇಮಕವಾಗಿದೆ.ಯಾವ ಆಯಾಮದಲ್ಲಿ ಎಸ್ಐಟಿ ಕೆಲಸ ಮಾಡಬೇಕೆಂಬ ಚೌಕಟ್ಟು ಸ್ಪಷ್ಟವಿಲ್ಲದೆ, ನೋಟಿಫಿಕೇಷನ್ ಇಲ್ಲದೆ, ತನಿಖೆಗೆ ಆದೇಶಿಸಿರುವುದು ಸರ್ಕಾರದ ವೈಫಲ್ಯ. ಪ್ರಕರಣದ ದಿಕ್ಕು ತಪ್ಪಿಸಿ ಕೇಸ್ ಮುಚ್ಚಿ ಹಾಕುವ ತಂತ್ರಗಾರಿಕೆ ಬಳಸಿತ್ತು.ಆದರೆ ಸಂತ್ರಸ್ಥೆ ಇದೀಗ ದೂರು ನೀಡಿದ್ದು, ತನಿಖೆ ಮುಂದಕ್ಕೆ ಸರಿ ದಾರಿಗೆ ಹೋಗಲಿದೆ ಎನ್ನಿಸುತ್ತಿದೆ ಎಂದರು.
ತಮಿಳುನಾಡು ಚುನಾವಣೆಯಲ್ಲಿ ಮಿತ್ರ ಪಕ್ಷ ಡಿಎಂಕೆಗೆ ಕಾಂಗ್ರೆಸ್ ಬೆಂಬಲವಿದೆ. ಮಿತ್ರ ಪಕ್ಷಗಳೊಂದಿಗೆ ಕಾಂಗ್ರೆಸ್ ಕೂಡಿ ಪ್ರಚಾರಕ್ಕೆ ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ತಮಿಳುನಾಡಿಗೆ ತೆರಳಿಲಿದ್ದಾರೆ. ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂದರು.