ಬೆಂಗಳೂರು : ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಾಜಿ ಸಿಎಂ, ಜೆಡಿಎಲ್‌ಪಿ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಹತ್ವದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಶಾಸಕರಾದ ಹೆಚ್ ಡಿ ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಶಿವಲಿಂಗೇಗೌಡ, ಸಾ ರಾ ಮಹೇಶ್, ಸಿ ಎಸ್ ಪುಟ್ಟರಾಜು, ಡಿ ಸಿ ತಮ್ಮಣ್ಣ, ಅನಿತಾ ಕುಮಾರಸ್ವಾಮಿ, ರವೀಂದ್ರ ಶ್ರೀಕಂಠಯ್ಯ, ಶ್ರೀನಿವಾಸಗೌಡ, ಅನ್ನದಾನಿ, ಸತ್ಯನಾರಾಯಣ, ಶ್ರೀನಿವಾಸ್ (ವಾಸು), ಗೌರಿಶಂಕರ್, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಬೋಜೇಗೌಡ, ಧರ್ಮೇಗೌಡ, ರಮೇಶ್‌ಗೌಡ, ಅಪ್ಪಾಜಿಗೌಡ, ಹಾಸನ ಜಿಲ್ಲೆ ಸಂಸದ ಪ್ರಜ್ವಲ್ ರೇವಣ್ಣ ಭಾಗವಹಿಸಿದ್ದಾರೆ.
ಮೈತ್ರಿ ಸರ್ಕಾರ ಪತನಗೊಂಡ ನಂತರ ಪಕ್ಷದಿಂದ ದೂರವೇ ಉಳಿದಿರುವ ಹಿರಿಯ ನಾಯಕ ಜಿ ಟಿ ದೇವೇಗೌಡ ಸಭೆಗೆ ಹಾಜರಾಗಿಲ್ಲ. ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಇದರ ಜೊತೆಗೆ ದೇವೇಗೌಡರನ್ನು ರಾಜ್ಯಸಭೆ ಅಭ್ಯರ್ಥಿ ಮಾಡುವ ಕುರಿತು ಸಹ ಚರ್ಚೆ ನಡೆಯುತ್ತಿದೆ.
ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೇ?, ಬೇಡವೇ? ಎಂಬುದರ ಬಗ್ಗೆಯೂ ಶಾಸಕರಿಂದ ಹೆಚ್ಡಿಕೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೂಲಗಳ ಪ್ರಕಾರ ರಾಜ್ಯಸಭೆ ಚುನಾವಣಾ ಕಣಕ್ಕೆ ದೇವೇಗೌಡರನ್ನು ಇಳಿಸುವ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಕಾಂಗ್ರೆಸ್ ಸಹ ಬೆಂಬಲ ನೀಡುವ ಬಗ್ಗೆ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ. ಹೀಗಾಗಿ ಇಂದು ಅಥವಾ ನಾಳೆ ರಾಜ್ಯಸಭೆ ಅಭ್ಯರ್ಥಿ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.