ಬೆಂಗಳೂರು: ತಾಯಿ ನೋಡಿಕೊಳ್ಳುವ ವಿಚಾರದಲ್ಲಿ ಪತ್ನಿಯೊಂದಿಗೆ ಗಲಾಟೆಯಾದ ಪರಿಣಾಮ ಮನನೊಂದು ತಾಯಿ ಮತ್ತು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಭಾಗ್ಯಮ್ಮ (57) ಹಾಗೂ ಶ್ರೀನಿವಾಸ್ (33) ಆತ್ಮಹತ್ಯೆ ಶರಣಾದ ತಾಯಿ ಮಗ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಹೆಗ್ಗನಹಳ್ಳಿಯ ಶ್ರೀಗಂಧ ನಗರದಲ್ಲಿ ವಾಸವಾಗಿದ್ದ ಶ್ರೀನಿವಾಸ್, ಕಳೆದ 8 ವರ್ಷಗಳ ಹಿಂದೆ ಸಂಧ್ಯಾ ಎಂಬುವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮಗನಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಶ್ರೀನಿವಾಸ್ ಅವರು ವಯಸ್ಸಾದ ತನ್ನ ತಾಯಿಯನ್ನು ಕರೆತಂದು ಇರಿಸಿಕೊಂಡಿದ್ದರು. ಇದಕ್ಕೆ ಪತ್ನಿ ಗಂಡನೊಂದಿಗೆ ಮುನಿಸಿಕೊಂಡಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ನಾಲ್ಕನೇ ಮಗುವೂ ಹೆಣ್ಣೆಂದು ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಂದೆ!
ದಂಪತಿ ನಡುವೆ ಪ್ರತಿದಿನ ಜಗಳವಾಗುತ್ತಿತ್ತು. ನಮಗೆ ಇರುವುದಕ್ಕೆ ಕಷ್ಟ. ಇನ್ನು ತಾಯಿಯನ್ನು ಕರೆದುಕೊಂಡು ಬಂದಿದ್ದೀಯಾ ಎಂದು ಪತಿಯೊಂದಿಗೆ ಜಗಳವಾಡುತ್ತಿದ್ದರು ಎಂದು ಹೇಳಲಾಗ್ತಿದೆ. ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ಮತ್ತು ಮಗ ಇಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.